ತುಮಕೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ನಡೆಯುತ್ತಿರುವ ದತ್ತಾಂಶ ಸಂಗ್ರಹ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಗಣತಿದಾರರು ಅರ್ಧಂಬರ್ಧ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಇಲ್ಲಿ ಸೋಮವಾರ ಆರೋಪಿಸಿದರು.
‘ಅರ್ಜಿ ನಮೂನೆಯಲ್ಲಿ 2-3 ವಿಷಯಗಳನ್ನು ನಮೂದಿಸದೆ ಸಹಿ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಪೂರ್ಣ ಪ್ರಮಾಣದ ಮಾಹಿತಿ ಇಲ್ಲದೆ ಸಮೀಕ್ಷೆ ಅಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಗಣತಿದಾರರು ಶೇ 103ರಷ್ಟು ಸಾಧನೆ ಮಾಡಿರುವುದಾಗಿ ತಿಳಿಸಿರುವುದು ತೃಪ್ತಿದಾಯಕವಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೀರಶೈವ ಸಮಾಜದ ಉಪ ಪಂಗಡವಾದ ಬುಡುಗ ಜಂಗಮದವರು ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಸೌಲಭ್ಯ ಪಡೆಯುತ್ತಿರುವುದು ಸರಿಯಾದ ಕ್ರಮವಲ್ಲ. ಬೆಂಗಳೂರಿನ ಸುಮ್ಮನಹಳ್ಳಿಯ ಬಾಬು ಜಗಜೀವನರಾಮ್ ಭವನದಲ್ಲಿ ಮೇ 31ರಂದು ಕಾರ್ಯಾಗಾರ ನಡೆಯಲಿದೆ. ಸರ್ಕಾರ, ಆಯೋಗ, ಪರಿಶಿಷ್ಟ ಜಾತಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಮುಖಂಡರಾದ ಕೆ.ಎಂ.ನಂಜುಂಡಯ್ಯ, ಎನ್. ಶ್ರೀನಿವಾಸ್, ಜಗದೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.