ADVERTISEMENT

ಆದಾಯದ ಬದಲು ತೆರಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 3:06 IST
Last Updated 19 ಆಗಸ್ಟ್ 2021, 3:06 IST
ತುಮಕೂರಿನಲ್ಲಿ ನಡೆದ ಮೆಕ್ಯಾನಿಕ್ ಹಾಗೂ ಸಹಾಯಕರ ಸಂಘದ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿದರು. ಮುಖಂಡರಾದ ಎನ್.ಕೆ.ಸುಬ್ರಮಣ್ಯ, ಲೋಕೇಶ್, ರಂಗಧಾಮಯ್ಯ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ನಡೆದ ಮೆಕ್ಯಾನಿಕ್ ಹಾಗೂ ಸಹಾಯಕರ ಸಂಘದ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್ ಮಾತನಾಡಿದರು. ಮುಖಂಡರಾದ ಎನ್.ಕೆ.ಸುಬ್ರಮಣ್ಯ, ಲೋಕೇಶ್, ರಂಗಧಾಮಯ್ಯ ಇತರರು ಉಪಸ್ಥಿತರಿದ್ದರು   

ತುಮಕೂರು: ಬದುಕು ನಡೆಸಲು ದುಬಾರಿ ವೆಚ್ಚವಾಗುತ್ತಿದ್ದು, ಜನರ ಅಗತ್ಯ ಪೂರೈಸಲು ಆದಾಯ ಹೆಚ್ಚಿಸದೆ ತೆರಿಗೆ ಹೊರೆಯನ್ನು ಸರ್ಕಾರ ಹೆಚ್ಚಳ ಮಾಡುತ್ತಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಟೀಕಿಸಿದರು.

ಮೆಕ್ಯಾನಿಕ್ ಹಾಗೂ ಸಹಾಯಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು. ಬೆಲೆ ಹೆಚ್ಚಳ ಮಾಡುವ ಮೂಲಕ ನಿರಂತರವಾಗಿ ಖಾಸಗೀಕರಣ ನೀತಿಗಳನ್ನು ಜಾರಿಮಾಡುತ್ತಿದೆ. ನಿರಂತರ ಹೋರಾಟದ ಮೂಲಕ ಸರ್ಕಾರವನ್ನು ಸರಿದಾರಿಗೆ ತರಬೇಕಿದೆ ಎಂದರು.

ಜಿಲ್ಲಾ ಖಜಾಂಚಿ ಲೋಕೇಶ್, ‘ಜನರು ಕಷ್ಟಪಡುತ್ತಿದ್ದರೆ ಜನಪ್ರತಿನಿಧಿಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಅಧ್ಯಕ್ಷ ರಂಗಧಾಮಯ್ಯ, ‘ಕೋವಿಡ್‌ ಮೂರನೇ ಅಲೆಯ ಭೀತಿ ಹೆಚ್ಚಾಗುತ್ತಿದ್ದು ಸರ್ಕಾರ ಮುಂಜಾಗ್ರತೆ ವಹಿಸಬೇಕು. ಜನರಿಗೆ ಕನಿಷ್ಠ ಪರಿಹಾರ ಒದಗಿಸಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದಜಿಲ್ಲಾ ಉಪಾಧ್ಯಕ್ಷ ಬಿ.ಉಮೇಶ್, ‘ಕೃಷಿ, ನಿರ್ಮಾಣ ವಲಯ, ಆಟೊಮೊಬೈಲ್ ತಂತ್ರಜ್ಞಾನ ಹೆಚ್ಚಿನ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಿವೆ. ಆದರೆ ಸರ್ಕಾರ ಹೊಸ ಸಾರಿಗೆ ನೀತಿಯನ್ನು ತಂದು ದಿನನಿತ್ಯ ಸ್ವಯಂ ಉದ್ಯೋಗದಿಂದ ದುಡಿಯುವ ಮೆಕ್ಯಾನಿಕ್, ಸಹಾಯಕರನ್ನು ಬೀದಿಗೆ ತಳ್ಳಲಿದೆ’ ಎಂದರು.

ನಿವೃತ್ತ ನ್ಯಾಯಾಧೀಶರು ಆತಂಕ ವ್ಯಕ್ತಪಡಿದಂತೆ ಹೊಸ ಕಾನೂನುಗಳು ಜನರಿಗೆ ಮಾರಕವಾಗಿ ಪರಿಣಮಿಸಿವೆ. 15 ವರ್ಷ ಹಳೆಯ ವಾಹನಗಳು ಹಾಗೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಜನಪರಗೊಳಿಸುವ ದಿಕ್ಕಿನಲ್ಲಿ ಚರ್ಚೆ ನಡೆಯಬೇಕಿದೆ. ಇನ್ನೂ ರಾಜ್ಯ ಕಾರ್ಮಿಕ ಸಚಿವರು ಅಸಂಘಟಿತ ಕಾರ್ಮಿಕರಿಗೆ ಮರಣ ಪರಿಹಾರ ನೀಡುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅಸಂಘಟಿತರ ಕಲ್ಯಾಣ ಮಂಡಳಿಗೆ ಹೆಚ್ಚಿನ ಹಣವನ್ನು ಬಜೆಟ್‌ನಲ್ಲಿ ಮೀಸಲಿರಿಸಿ ಅಸಂಘಟಿತ ವಲಯದ ಮೆಕ್ಯಾನಿಕ್ ಹಾಗೂ ಸಹಾಯಕರಿಗೆ ಸಾಮಾಜಿಕ ಭದ್ರತೆಯಡಿ ಶಿಕ್ಷಣ, ಅನಾರೋಗ್ಯ, ಅಪಘಾತ ಪರಿಹಾರ, ನಿವೃತ್ತಿ ವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಜನರು ಬದುಕಿದ್ದಾಗಲೇ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಮುಖಂಡರಾದ ಕೃಷ್ಣಮೂರ್ತಿ, ಇಂತು, ಟಿ.ಎಂ.ಗೋವಿಂದರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.