.
ತುಮಕೂರು: ನಗರದ ಹೃದಯ ಭಾಗದಲ್ಲಿರುವ ಸಿದ್ಧಿವಿನಾಯಕ ಮಾರುಕಟ್ಟೆ ಸ್ಥಳದಲ್ಲಿ ಮಾಲ್ ಹಾಗೂ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಕಟ್ಟಡ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಮುಖಂಡರು, ವರ್ತಕರು, ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.
ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಖಾಸಗಿ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಶನಿವಾರ ಗುದ್ದಲಿ ಪೂಜೆ ನೆರವೇರಿಸಲು ಮುಂದಾಗಿದೆ.
ಕಟ್ಟಡ ನಿರ್ಮಾಣಕ್ಕೆ ವಿರೋಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಶುಕ್ರವಾರ ಸಭೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ‘ಗುದ್ದಲಿ ಪೂಜೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು’ ಎಂದು ಎಚ್ಚರಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಹನುಮಂತರಾಜು, ಬಜರಂಗ ದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಜಿ.ಕೆ ಶ್ರೀನಿವಾಸ್, ಸಿದ್ಧಿವಿನಾಯಕ ಸೇವಾ ಮಂಡಳಿ ಕಾರ್ಯದರ್ಶಿ ನಾಗೇಶ್, ಸದಸ್ಯ ನಾಗಣ್ಣ, ಮುಖಂಡರಾದ ಚೇತನ್ ಕುಮಾರ್, ಮಲ್ಲಿಕಾರ್ಜುನ್, ಮೋಹನ್, ಮಾರಪ್ಪ, ಫಯಾಜ್, ಬೀದಿಬದಿ ವ್ಯಾಪಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಬಿಡುವುದಿಲ್ಲ. ದೇಗುಲ ಕೆಡವಲು ಅವಕಾಶ ನೀಡುವುದಿಲ್ಲ. ಹಿಂದೆ ಮಾರುಕಟ್ಟೆ ಇತ್ತು. ಅದು ಸ್ಥಳಾಂತರವಾದ ನಂತರ ಖಾಲಿ ಉಳಿದಿದ್ದು, ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರ ಪಾಲಾಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಈ ಸಮಯದಲ್ಲಿ ಅಶೋಕ್ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆಯಿತು.
ಶನಿವಾರ ನಡೆಯುವ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸದಂತೆ ತಡೆಯುವ ಪ್ರಯತ್ನ ನಡೆದಿದೆ. ಪೊಲೀಸರ ಮೂಲಕ ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಬೆದರಿಕೆಗೆ ಜಗ್ಗದೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಸಭೆ ನಂತರ ಹನುಮಂತರಾಜು ತಿಳಿಸಿದರು.
ಮಹಾನಗರ ಪಾಲಿಕೆ ದಾಖಲಾತಿ ಪ್ರಕಾರ ಸಿದ್ಧಿವಿನಾಯಕ ಮಾರುಕಟ್ಟೆ ಪ್ರದೇಶ ಪಾರ್ಕ್ ಜಾಗವಾಗಿರುತ್ತದೆ. ಪಾರ್ಕ್ ಪ್ರದೇಶವನ್ನು ಪರಭಾರೆ, ಗುತ್ತಿಗೆ ನೀಡುವಂತಿಲ್ಲ. ಕಟ್ಟಡ ನಿರ್ಮಿಸುವಂತಿಲ್ಲ. ಆದರೂ ಕಟ್ಟಡ ನಿರ್ಮಿಸಲು ಪಾಲಿಕೆ ಮುಂದಾಗಿದೆ ಎಂದು ಮಂಜು ಭಾರ್ಗವ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.