ತುಮಕೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಸಮಯವನ್ನು ವಿಸ್ತರಿಸುವಂತೆ ಒತ್ತಡ ಹೆಚ್ಚಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಬೆಂಗಳೂರಿನಲ್ಲಿ ಸಾರಿಗೆ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಕಾಲಾವಧಿ ವಿಸ್ತರಣೆ, ನಿಗದಿಪಡಿಸಿದ ಮೊತ್ತವನ್ನು ಕಡಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗಾಗಿ ವಾಹನಗಳನ್ನು ಜಿಲ್ಲಾ ಕೇಂದ್ರಗಳಿಗೆ ತರಬೇಕಾಗಿದೆ. ಕೇವಲ ಈ ಒಂದು ಕೆಲಸಕ್ಕಾಗಿ ಗ್ರಾಮೀಣ ಭಾಗದಿಂದ ವಾಹನಗಳನ್ನು ತರಲು ಆಗುತ್ತಿಲ್ಲ. ಇದರಿಂದ ತಾಲ್ಲೂಕು ಕೇಂದ್ರಗಳಲ್ಲಿಯೂ ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
‘ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆ. 17 ಕಡೆಯ ದಿನಾಂಕವಾಗಿದ್ದು, ಇದನ್ನು ವಿಸ್ತರಿಸಬೇಕು. ಕನಿಷ್ಠ ಇನ್ನು ಮೂರು ತಿಂಗಳು ಕಾಲ ಅವಕಾಶ ನೀಡಬೇಕು’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಟಿ.ಜೆ.ಗಿರೀಶ್ ಎಂದು ಒತ್ತಾಯಿಸಿದ್ದಾರೆ.
ನಂಬರ್ ಪ್ಲೇಟ್ ಅಳವಡಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಅಲ್ಲೂ ಸರ್ವರ್ ಸಮಸ್ಯೆಯಾಗುತ್ತಿದೆ. ವಾಹನಗಳು ರಸ್ತೆಗೆ ಇಳಿದರೆ ಪೊಲೀಸರು ಈಗಾಗಲೇ ಎಚ್‌ಎಸ್‌ಆರ್‌ಪಿ ನಂಬರ್, ಆನ್‌ಲೈನ್‌ನಲ್ಲಿ ನೋಂದಣಿಯಾದ ಪತ್ರ ಕೇಳುತ್ತಿದ್ದಾರೆ. ಇದರಿಂದ ವಾಹನಗಳ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.