ತುಮಕೂರು: ನಗರದ ಸಿದ್ಧಾರ್ಥ ಸಮೂಹ ಸಂಸ್ಥೆಯ ವೈದ್ಯಕೀಯ, ಎಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ವೈದ್ಯಕೀಯ ಕಾಲೇಜಿನಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಸ್ವಾತಂತ್ರ್ಯದ ಸಮಯದಲ್ಲಿ ರಾಷ್ಟ್ರದ ಸಾಕ್ಷರತೆ ಕೇವಲ ಶೇ 12ರಷ್ಟಿತ್ತು, ಈಗ ಶೇ 80ಕ್ಕೆ ತಲುಪಿದೆ. ಎರಡು ಹೊತ್ತು ಊಟಕ್ಕೆ ಪರದಾಡುವ ಪರಿಸ್ಥಿತಿ ಇತ್ತು. ಸದ್ಯ ನಾನಾ ರಾಷ್ಟ್ರಗಳಿಗೆ ಆಹಾರ ಉತ್ಪನ್ನ ರಫ್ತು ಮಾಡುತ್ತಿದ್ದೇವೆ’ ಎಂದರು.
ದೇಶದ ಜನ ಸಂಖ್ಯೆಯನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು ತಾಂತ್ರಿಕ ಪರಿಣಿತರು, ವೈದ್ಯರನ್ನು ಇಡೀ ಪ್ರಪಂಚಕ್ಕೆ ನೀಡುತ್ತಿದೆ. ವಿಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ತೋರುತ್ತಿದೆ ಎಂದು ಹೇಳಿದರು.
ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ, ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ಕುಲಸಚಿವ ಅಶೋಕ್ ಮೆಹ್ತಾ, ಪ್ರಾಂಶುಪಾಲ ಡಾ.ಪ್ರವೀಣ್ ಬಿ.ಕುಡುವ, ಉಪ ಪ್ರಾಂಶುಪಾಲ ಡಾ.ಪ್ರಭಾಕರ್, ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ.ವೆಂಕಟೇಶ್ವರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.