ತುರುವೇಕೆರೆ: ‘ಸಂವಿಧಾನದ ಅಡಿಯಲ್ಲಿ ಪ್ರತಿರೋಧ ವ್ಯಕ್ತಡಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂದು ಚಲನಚಿತ್ರ ನಟ ಚೇತನ್ ಅಹಿಂಸಾ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ವಾದ ಹಾಗೂ ವಿವಿಧ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದಿದ್ದು ಅಕ್ಷ್ಯಮ್ಯ ಅಪರಾಧ. ಇದು ಸಂವಿಧಾನಕ್ಕೆ ಮಾಡಿದ ಅಪಮಾನ. ಹಿರಿಯ ವಕೀಲನಿಗೆ ಕಾನೂನು ಕೈಗೆ ಎತ್ತಿಕೊಳ್ಳಲು ಅಧಿಕಾರ ಕೊಟ್ಟವರು ಯಾರು? ಸಂವಿಧಾನದ ಅಡಿಯಲ್ಲಿ ಪ್ರತಿರೋದ ವ್ಯಕ್ತಪಡಿಸಬಹುದಾಗಿತ್ತು. ಕಾನೂನು ವಿರುದ್ಧವಾಗಿ ನಡೆದುಕೊಂಡ ವಕೀಲರನ್ನು ಕೂಡಲೇ ಬಂಧಿಸಬೇಕು’ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ವಾದ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ‘ಇದೊಂದು ಘೋರ ಕೃತ್ಯವಾಗಿದೆ. ರಾಷ್ಟ್ರಕ್ಕೆ, ಸಂವಿಧಾನಕ್ಕೆ, ಅಂಬೇಡ್ಕರ್‌ಗೆ ಮಾಡಿದ ಅಪಮಾನ. ಇಂತಹ ಮನುವಾದಿಗಳು ಈ ದೇಶವನ್ನು ಜಾತಿ, ಧರ್ಮಗಳ ನಡುವೆ ಎತ್ತಿಕಟ್ಟಿ ಸುಡುತ್ತಿದ್ದಾರೆ. ಮನುವಾದಿಗಳು ಬಸವಣ್ಣ, ಗಾಂಧಿಜೀಯನ್ನು ಕೊಂದರು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಸಮಾನ ಮನಸ್ಕರ ಸಮಾಜ ಸಂವಿಧಾನದ ಪರವಾಗಿ ಹೋರಾಟ ಮಾಡುತ್ತೇವೆ. ಮನುವಾದಿ ವಕೀಲನನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಾಣಸಂದ್ರ ವೃತ್ತದಲ್ಲಿ ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿ ದಹಿಸಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.