ತುಮಕೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸಲ್ಲಿಸಿರುವ ಆರ್ಥಿಕ, ಸಾಮಾಜಿಕ, ಜಾತಿ ಗಣತಿಯ ವರದಿಯನ್ನು ಸರ್ಕಾರ ಸ್ವೀಕರಿಸಿ, ಜನತೆಯ ಮುಂದಿಡಬೇಕು ಎಂದು ಹಿಂದುಳಿದ ವರ್ಗ, ಸಮುದಾಯದ ಮುಖಂಡರು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಸಭೆ ಭಾನುವಾರ ನಡೆಯಿತು. ಸಭೆಯಲ್ಲಿ ಹಿಂದುಳಿದ ಸಮುದಾಯದ ಮುಖಂಡರು ಆಯೋಗ ಸಿದ್ಧಪಡಿಸಿರುವ ವರದಿ ಒಪ್ಪಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕ ಧನಿಯ
ಕುಮಾರ್ ಮಾತನಾಡಿ, ‘ಇತ್ತೀಚಿನ ಜಾತಿ ಆಧಾರಿತ ಚುನಾವಣೆಗಳಿಂದ ಒಟ್ಟು ಜನಸಂಖ್ಯೆಯಲ್ಲಿ ಶೇ 65ರಷ್ಟು ಇರುವ ಹಿಂದುಳಿದ ಸಮುದಾಯಗಳು ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಯಾವುದೇ ಸಮಾಜ, ಪಕ್ಷದ ವಿರುದ್ಧ ನಡೆಯುತ್ತಿರುವ ಸಭೆಯಲ್ಲ’ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಗೋಪಾಲ್, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂತರಾಜು ನೇತೃತ್ವದಲ್ಲಿ ಸಾಮಾಜಿಕ, ಶೈಕ್ಷಣಿಕ, ಜನಗಣತಿಗೆ ಚಾಲನೆ ನೀಡಿದ್ದರು. 2018ರಲ್ಲಿ ಬಂದ ಸಮ್ಮಿಶ್ರ ಸರ್ಕಾರವಾಗಲಿ, ಈಗ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರವಾಗಲಿ ಆಯೋಗ ನೀಡಿದ ವರದಿಯತ್ತ ಕಣ್ಣೆತ್ತಿಯೂ ನೋಡಿಲ್ಲ. ಈ ಬಗ್ಗೆ ಹಿಂದುಳಿದ ವರ್ಗಗಳು ಒಕ್ಕೊರಲಿನಿಂದ ಧ್ವನಿ ಎತ್ತಬೇಕಾಗಿದೆ. ಪ್ರತಿ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಜನಸಂಖ್ಯೆಯ ಪರಿಷ್ಕೃತ ಪಟ್ಟಿ ಬಿಡುಗಡೆಯಾಗುವಂತೆ ಮಾಡಲು ಒತ್ತಡ ತರಬೇಕಾಗಿದೆ’ ಎಂದರು.
ನಿವೃತ್ತ ತಹಶೀಲ್ದಾರ್ ಜಿ.ಎಂ.ಸಣ್ಣಮುದ್ದಯ್ಯ, ‘ದೊಡ್ಡ ಮೀನು ಸಣ್ಣ ಮೀನು ತಿನ್ನುತ್ತದೆ ಎನ್ನುವ ಪರಿಸ್ಥಿತಿ ನಮ್ಮದು. ದೊಡ್ಡ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ, ಒಂದೇ ದಿನದಲ್ಲಿ ಅಧ್ಯಕ್ಷರನ್ನು ನೇಮಿಸಿ ಅನುದಾನ ನೀಡುತ್ತಾರೆ. ಆದರೆ ಶಿರಾ ಉಪಚುನಾವಣೆಯಲ್ಲಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ’ ಎಂದು ಆರೋಪಿಸಿದರು.
ಜಿಲ್ಲಾ ಜಾತ್ಯತೀತ ವೇದಿಕೆ ಅಧ್ಯಕ್ಷ ಆಡಿಟರ್ ಆಂಜನಪ್ಪ, ‘ಹಿಂದುಳಿದ ವರ್ಗಗಳ ಜನರು ತಮ್ಮ ಹಕ್ಕು, ಜವಾಬ್ದಾರಿಯನ್ನು ಮರೆತಿರುವ ಪರಿಣಾಮ ಇಂದು ಇಂತಹದುಃಸ್ಥಿತಿಗೆ ತಲುಪಿದ್ದೇವೆ. ನಮ್ಮ ಬಲ ಏನು ಎಂಬುದನ್ನು 1996ರ ಉಪಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದೇವೆ. ಮತ್ತೊಮ್ಮೆ ಅಂತಹ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು.
ಸಭೆಯಲ್ಲಿ ಮುಖಂಡರಾದ ಆರ್.ರಾಜೇಂದ್ರ, ಎಸ್.ನಾಗಣ್ಣ, ಗಾಣಿಗ ಸಮಾಜದ ಕುಮಾರಸ್ವಾಮಿ, ಜೈನ ಸಮಾಜದ ದಿನೇಶ್ ಗುಂಡಣ್ಣ, ಸುರೇಶ್, ಈಡಿಗ ಸಮಾಜದ ಮಲ್ಲಸಂದ್ರ ಶಿವಣ್ಣ, ಸಮಿತಾ ಸಮಾಜದ ಮಂಜೇಶ್, ಅಲ್ಪಸಂಖ್ಯಾತ ಸಮಾಜದ ನಯಾಜ್, ವೈಶ್ಯ ಸಮಾಜದ ಅಮರನಾಥ್, ಸಾದರ ಸಮಾಜದ ಶಿವಕುಮಾರ್, ರಾವತ್ ಸಮಾಜದ ಮೋಹನ್, ಕುರುಹಿನ ಶೆಟ್ಟಿ ಸಮಾಜದ ಅನಿಲ್ ಕುಮಾರ್,ಕ್ಷತ್ರಿಯ ಸಮಾಜದ ಶ್ರೀನಿವಾಸ್, ಗುರುಪ್ರಸಾದ್, ಮಡಿವಾಳ ಸಮಾಜದ ಕುಮಾರ್,ಚಿ.ನಿ.ಪುರುಷೋತ್ತಮ್, ಪಾಲಿಕೆ ಸದಸ್ಯ ನರಸಿಂಹರಾಜು, ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕರಾದ ಚಂದ್ರಶೇಖರಗೌಡ, ಪ್ರೆಸ್ ರಾಜಣ್ಣ, ಕೆಂಪರಾಜು, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.