ADVERTISEMENT

ಪ.ಪಂ. ಮುಖ್ಯಾಧಿಕಾರಿ ವರ್ಗಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:12 IST
Last Updated 7 ಆಗಸ್ಟ್ 2020, 16:12 IST

ತುರುವೇಕೆರೆ: ‘ದಲಿತರ ಸಮಸ್ಯೆಗಳ ಆಲಿಸದ, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡಬೇಕು’ ಎಂದು ಛಲವಾದಿ ಮಹಾಸಭಾ ತಾಲ್ಲೂಕು ಸಂಚಾಲಕ ಎಚ್.ಕೆ.ಜಗದೀಶ್ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಟ್ಟಣದ ಬಸವೇಶ್ವರ ನಗರ ನಿವಾಸಿ ರಮೇಶ್ ಎಂಬುವರು ಮೂರು ತಿಂಗಳ ಹಿಂದೆ ತಮ್ಮ ಮನೆಯ ಚಕ್‌ಬಂದಿ ನಿಗದಿಪಡಿಸಿಕೊಂಡುವಂತೆ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಖುದ್ದು ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ಅಹವಾಲು ಹೇಳಲು ಮುಂದಾದರೆ ಉಡಾಫೆಯ ಉತ್ತರ ನೀಡುತ್ತಾರೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಾಡಿದ ಮನವಿಗೂ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ದೂರಿದರು.

ಮಂಜುಳಾದೇವಿ ಅವರು ಕೆಲ ಶಿಫಾರಸ್ಸು ಬಳಸಿ ಮುಖ್ಯಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ. ಕೆಎಂಸಿ ನಿಯಮದ ಪ್ರಕಾರ ಪೂರ್ಣ ಪ್ರಮಾಣದ ಮುಖ್ಯಾಧಿಕಾರಿಯಾಗಿ ಅವರು ಕಾರ್ಯ ನಿರ್ವಹಿಸುವಂತಿಲ್ಲ. ಕಚೇರಿಗೆ ಬರುವ ದಲಿತರ ಸಮಸ್ಯೆಗಳನ್ನು ಕೇಳುವ ಕನಿಷ್ಠ ಸೌಜನ್ಯ ಇವರಿಗಿಲ್ಲ. ಅವರನ್ನು ಜಿಲ್ಲಾಧಿಕಾರಿ ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಪ.ಪಂ. ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಬಿ.ಹನುಮಂತಯ್ಯ, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಡೊಂಕಿಹಳ್ಳಿರಾಮಯ್ಯ, ಪುರ ರಾಮಚಂದ್ರಯ್ಯ, ಸೋಮಶೇಖರ್, ಶ್ರೀನಿವಾಸ್, ಕೃಷ್ಣ, ಮನು, ಮಹಾದೇವ್, ದಯಾನಂದ್, ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.