ADVERTISEMENT

ಜಲಸಂರಕ್ಷಣಾ ಆಂದೋಲನ ಪರಿಣಾಮಕಾರಿ ಜಾರಿಗೆ ಸೂಚನೆ

ಜಲಶಕ್ತಿ ಅಭಿಯಾನ ಕೇಂದ್ರ ತಂಡದಿಂದ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 10:35 IST
Last Updated 13 ಸೆಪ್ಟೆಂಬರ್ 2019, 10:35 IST
ಜಲಶಕ್ತಿ ಅಭಿಯಾನ  ಕುರಿತ  ಅಧಿಕಾರಿಗಳ ಸಭೆಯಲ್ಲಿ ಕೇಂದ್ರ ತಂಡದ ನೊಡಲ್ ಅಧಿಕಾರಿ ಆರ್.ಕೆ.ಚಂದೋಳಿ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಇತರರಿದ್ದರು
ಜಲಶಕ್ತಿ ಅಭಿಯಾನ  ಕುರಿತ  ಅಧಿಕಾರಿಗಳ ಸಭೆಯಲ್ಲಿ ಕೇಂದ್ರ ತಂಡದ ನೊಡಲ್ ಅಧಿಕಾರಿ ಆರ್.ಕೆ.ಚಂದೋಳಿ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಇತರರಿದ್ದರು   

ತುಮಕೂರು: ‘ಜಿಲ್ಲೆಯಲ್ಲಿ ಮಳೆ ಬಾರದೇ ನೀರಿನ ಕೊರತೆ ಇರುವುದರಿಂದ ಜಲಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು’ ಎಂದು ಜಲಶಕ್ತಿ ಅಭಿಯಾನದ ಕೇಂದ್ರ ತಂಡವು ಕೃಷಿ ಇಲಾಖೆ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸೂಚಿಸಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸೂಚಿಸಿತು.

ಜಲಶಕ್ತಿ ಅಭಿಯಾನ ಕೇಂದ್ರ ತಂಡದ ನೋಡಲ್ ಅಧಿಕಾರಿ ಆರ್.ಕೆ.ಚಂದೋಳಿ ಮಾತನಾಡಿ, ‘ನೀರಿನ ಸಂರಕ್ಷಣೆಗೆ ಚೆಕ್‌ ಡ್ಯಾಂಗಳ ನಿರ್ಮಾಣ, ಮಳೆ ನೀರು ಸಂಗ್ರಹ ವಿಧಾನಗಳ ಅಳವಡಿಕೆ ಸೇರಿದಂತೆ ಜಲಮೂಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ADVERTISEMENT

‘ಜಲಮೂಲ ರಕ್ಷಣೆ ಕುರಿತು ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು’ ಎಂದು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಅಪೂರ್ಣಗೊಂಡ ಚೆಕ್ ಡ್ಯಾಂ, ಗೋಕಟ್ಟೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಷ್ಟು ಕೃಷಿ ಮೇಳಗಳನ್ನು ಆಯೋಜಿಸಲಾಗಿದೆ ಎಂಬುದರ ವಿವರಗಳನ್ನು ವೆಬ್‌ಸೈಟ್‌ಗೆ ಅಪ್‌ ಲೋಡ್ ಮಾಡಲು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ,‘ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬವಣೆಯನ್ನು ನೀಗಿಸಲು ಕೆರೆ-ಕುಂಟೆಗಳಲ್ಲಿ ನೀರು ಶೇಖರಣೆ ಕ್ರಮ ಅನುಸರಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಕೊರತೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತಿದೆ’ ಎಂದು ಹೇಳಿದರು.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಬೆಳೆ ಬೆಳೆಯಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಋತುಕಾಲಿಕ ಬೆಳೆಯನ್ನು ಬೆಳೆಯುವ ಬಗ್ಗೆ ರೈತರಿಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ,‘ಜಲಶಕ್ತಿ ಅಭಿಯಾನವನ್ನು ಒಂದು ಜನಾಂದೋಲನವಾಗಿ ರೂಪಿಸಬೇಕಿದೆ. ನೀರಿನ ಕೊರತೆ ನೀಗಿಸಲು ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

‘ಕಳೆದ ಬಾರಿ ಜಿಲ್ಲೆಗೆ ಕೇಂದ್ರ ತಂಡ ಭೇಟಿ ನೀಡಿದಾಗ ಚೆಕ್‌ ಡ್ಯಾಂ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಿತ್ತು. ಈ ಬಾರಿ ತಂಡವು ಸ್ಥಳ ಪರಿಶೀಲನೆ ನಡೆಸುವಾಗ ಸೂಕ್ತ ಮಾಹಿತಿಯೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಲಶಕ್ತಿ ಅಭಿಯಾನ ಕೇಂದ್ರ ತಂಡದ ಸಂಜಯ್ ಶ್ರೀವತ್ಸ, ಬಲರಾಮ್‌ ಪ್ರಸಾದ್ ಭೀಮಲ್, ಕೆ.ಎ.ನಾಯ್ಡು, ಶ್ರೀಕಾಂತ್ ಕಂಬ್ಲೆ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು, ಯೋಜನಾ ಎಂಜಿನಿಯರ್ ಶ್ರೀನಿವಾಸ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.