ತುಮಕೂರಿನಲ್ಲಿ ಶುಕ್ರವಾರ ಲೇಖಕಿಯರ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಲೇಖಕಿ ಮೀನಾಕ್ಷಿ ಬಾಳಿ, ರಾಣಿ ಚಂದ್ರಶೇಖರ್, ರಂಗಭೂಮಿ ಕಲಾವಿದೆ ವಾಣಿ ಸತೀಶ್, ಮೊದಲಾದವರು ಪಾಲ್ಗೊಂಡಿದ್ದರು
ತುಮಕೂರು: ಶಾಸನ ಸಭೆಗಳಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ಕೊಡಬೇಕು ಎಂಬ ಕಾನೂನು ಜಾರಿಯಾದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ ಎಂದು ಲೇಖಕಿ ಮೀನಾಕ್ಷಿ ಬಾಳಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಲೇಖಕಿಯರ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮತ್ತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮೀಸಲಾತಿ ಬದಲಿಗೆ ಮಹಿಳೆಯರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುವುದು, ಮಹಿಳೆಯರಿಗಾಗಿ ಸೌಂದರ್ಯ ಲಹರಿ ಜಪ ಮಾಡಿಸುವ ಕೆಲಸ ನಡೆಯುತ್ತಿದೆ. ವ್ಯಾಪಾರ, ಬಂಡವಾಳಶಾಹಿ ಲೋಕ ಹೆಣ್ಣು ಮಕ್ಕಳನ್ನು ಮತ್ತೆ ಸಾಂಪ್ರದಾಯಿಕ ವಾದದಲ್ಲಿಯೇ ಕಟ್ಟಿ ಹಾಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಹೆಣ್ಣು ಏನು ಉಡಬೇಕು, ಏನು ತಿನ್ನಬೇಕು ಎಂಬುದನ್ನೂ ಪುರುಷ ಸಮಾಜವೇ ತೀರ್ಮಾನಿಸುತ್ತದೆ. ಇದು ಇಂದಿಗೂ ನಿಂತಿಲ್ಲ. ಕೆಲವು ವಾಹನಗಳ ಮೇಲೆ ಬರೆದಿರುವ ಬರಹ ನೋಡಿದರೆ ನೋವಾಗುತ್ತದೆ. ಎಲ್ಲ ಕಡೆ ಹೆಣ್ಣಿನ ಶೋಷಣೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಚನಕಾರರು ವೇದ, ಶಾಸ್ತ್ರ, ಪುರಾಣಗಳನ್ನು ಓದುವುದು ತೌಡು ಕುಟ್ಟುವ ಕೆಲಸ ಎಂದಿದ್ದರು. ಹೆಣ್ಣು ಗುಲಾಮಳು, ಚಂಚಲೆ ಎಂದು ಇದೇ ಪುರಾಣಗಳು ಹೇಳಿವೆ. ಮನು ಧರ್ಮ ಶಾಸ್ತ್ರದ 9ನೇ ಅಧ್ಯಾಯದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಕೋನ ಅತ್ಯಂತ ಹೀನಾಯವಾಗಿದೆ ಎಂದು ಹೇಳಿದರು.
ಗಾಯಕಿ ಕುಸುಮಾ ಜೈನ್ ಅವರಿಗೆ ದಿ.ಸೋಮವತಿ ಮತ್ತು ದಿ.ಇಂದಿರಮ್ಮ ಅವರ ಸ್ಮರಣಾರ್ಥ ‘ಸಾಧಕ ಮಹಿಳೆ’ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕಿ ಬಾ.ಹ.ರಮಾಕುಮಾರಿ ಅವರ ‘ಬಹುತ್ವದೆಡೆಗೆ ನಮ್ಮ ನಡಿಗೆ’ ಕೃತಿ ಲೋಕಾರ್ಪಣೆ ಗೊಳಿಸಲಾಯಿತು.
ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಪದಾಧಿಕಾರಿಗಳಾದ ಸಿ.ಎಲ್.ಸುನಂದಮ್ಮ, ಶ್ವೇತಾರಾಣಿ, ರಾಣಿ ಚಂದ್ರಶೇಖರ್, ಮರಿಯಂಬಿ, ರಂಗಭೂಮಿ ಕಲಾವಿದೆ ವಾಣಿ ಸತೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್.ಸುಕನ್ಯಾ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.