
ತುಮಕೂರು: ಷೇರುಗಳ ಮೇಲೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ನಗರದ ಮರಳೂರಿನ ಎ.ಸೀತರಾಮಾಂಜಿನೇಯ ರೆಡ್ಡಿ ಎಂಬುವರಿಗೆ ₹73.70 ಲಕ್ಷ ವಂಚಿಸಲಾಗಿದೆ.
‘JAGJIT SINGH STOCKS WISDOM CENTER-Insight Partners Club IN’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ರೆಡ್ಡಿ ಅವರ ನಂಬರ್ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಷೇರು ಖರೀದಿ, ಮಾರಾಟದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಗ್ರೂಪ್‌ನಲ್ಲಿ ಇದ್ದ ಇತರೆ ಸದಸ್ಯರು ತಮಗೆ ಲಾಭ ಬಂದಿರುವುದಾಗಿ ತಿಳಿಸುತ್ತಿದ್ದರು. ಇದನ್ನು ನಂಬಿದ ರೆಡ್ಡಿ ಹಣ ಹೂಡಿಕೆಗೆ ಆಸಕ್ತಿ ತೋರಿದ್ದರು.
₹1 ಲಕ್ಷ ಪಾವತಿಸಿ ಸದಸ್ಯತ್ವ ಪಡೆದಿದ್ದರು. ನಂತರ https://m.daltoninv.cc/ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆ ಸಲ್ಲಿಸಿ, ಖಾತೆ ತೆರೆದಿದ್ದರು. ಆರೋಪಿಗಳು ವಾಟ್ಸ್ ಆ್ಯಪ್ ಮುಖಾಂತರ ಹೂಡಿಕೆ ಮಾಡಬೇಕಾದ ಬ್ಯಾಂಕ್ ಖಾತೆಗಳ ವಿವರ ನೀಡಿದ್ದು, ರೆಡ್ಡಿ ಹಂತ ಹಂತವಾಗಿ ₹73.70 ಹಣವನ್ನು ವರ್ಗಾಯಿಸಿದ್ದರು. ವೆಬ್‌ಸೈಟ್ ಖಾತೆಗೆ ₹2.88 ಕೋಟಿ ಜಮಾ ಆಗಿದೆ ಎಂದು ತೋರಿಸಿದೆ.
ಶೇ 15ರಷ್ಟು ತೆರಿಗೆ ಹಣ, ₹34 ಲಕ್ಷ ಪಾವತಿಸಿದರೆ ಮಾತ್ರ ವಿತ್ ಡ್ರಾ ಮಾಡಿಕೊಳ್ಳಲು ಸಾಧ್ಯ ಎಂದು ವಂಚಕರು ತಿಳಿಸಿದ್ದಾರೆ. ಸೈಬರ್ ವಂಚನೆಗೆ ಒಳಗಾದ ವಿಷಯ ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
₹5.49 ಲಕ್ಷ ಕಳೆದುಕೊಂಡರು!
ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ ಗಾಂಧಿನಗರದ ಕೆ.ಎಲ್.ಎಸ್.ಹರೀಶ್ ಶೆಟ್ಟಿ ₹5.49 ಲಕ್ಷ ಕಳೆದುಕೊಂಡಿದ್ದಾರೆ. ಆರೋಪಿ ಕರೆ ಮಾಡಿ ಅನು ಎಂಬ ಹೆಸರಿನಿಂದ ಪರಿಚಯಿಸಿಕೊಂಡಿದ್ದಾರೆ. ‘ಷೇರು ಮಾರುಕಟ್ಟೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದು ನಾನು ಹೇಳಿದಂತೆ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಗಳಿಸಬಹುದು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಲಾಭಾಂಶದಲ್ಲಿ ಶೇ 30ರಷ್ಟು ಪಾಲು ಕೇಳಿದ್ದಾರೆ. ಇದಕ್ಕೆ ಒಪ್ಪಿದ ಹರೀಶ್ ಒಟ್ಟು ₹549999 ಹಣ ವರ್ಗಾಯಿಸಿದ್ದಾರೆ. ಹಣ ಪಾವಸ್ ಕೇಳಿದಾಗ ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ನೀವು ಹಣ ಪಡೆಯಲು ಸಾಧ್ಯ ಎಂದು ಆರೋಪಿಗಳು ಹೇಳಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ವಂಚನೆಯ ವಿಚಾರ ಗೊತ್ತಾಗಿದೆ. ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.