ADVERTISEMENT

ತುಮಕೂರು ‘ಬೆಂಗಳೂರು ಉತ್ತರ’ ಜಿಲ್ಲೆ?

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 2:55 IST
Last Updated 11 ಜೂನ್ 2025, 2:55 IST
   

ತುಮಕೂರು: ಬೆಂಗಳೂರು ಮಹಾನಗರದ ಜತೆಗೆ ತುಮಕೂರು ಜಿಲ್ಲೆಯನ್ನು ಬೆಸೆಯುವ ಪ್ರಯತ್ನ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ‘ಬೆಂಗಳೂರು ಉತ್ತರ’ ಜಿಲ್ಲೆಯನ್ನಾಗಿ ಮಾರ್ಪಡಿಸುವ ಸಿದ್ಧತೆಗಳು ನಡೆದಿವೆ.

ನಗರದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯವನ್ನು ಖಚಿತಪಡಿಸಿದರು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಬೆಂಗಳೂರು ನಗರ ಶರವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಅಕ್ಕಪಕ್ಕದ ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದ ವರೆಗೂ ವಿಸ್ತರಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲೆ ಎನ್ನುವುದಕ್ಕೂ ‘ಬೆಂಗಳೂರು ಉತ್ತರ’ ಜಿಲ್ಲೆ ಎನ್ನುವುದಕ್ಕೂ ವ್ಯತ್ಯಾಸವಿದೆ. ನ್ಯೂಯಾರ್ಕ್‌ನಲ್ಲಿ ಇರುವವರಿಗೆ ‘ಬೆಂಗಳೂರು ಉತ್ತರ’ ಎಂದರೆ ಸುಲಭವಾಗಿ ಅರ್ಥವಾಗುತ್ತದೆ. ತುಮಕೂರು ಜಿಲ್ಲೆ ಎಂದರೆ ಎಲ್ಲೋ ಇದೇ ಎಂಬ ಭಾವನೆ ಮೂಡುತ್ತದೆ. ಅದಕ್ಕಾಗಿ ಇಂತಹದೊಂದು ಪ್ರಯತ್ನ ನಡೆಸಿದೆ ಎಂದು ವಿವರಿಸಿದರು.

ADVERTISEMENT

ಬೆಂಗಳೂರು ನಗರ ಈಗಾಗಲೇ ನೆಲಮಂಗಲದಿಂದ ಹೊರಕ್ಕೆ ಬೆಳವಣಿಗೆ ಕಂಡಿದೆ. ಅಲ್ಲಿಂದ 30 ಕಿ.ಮೀ ಬಂದರೆ ತುಮಕೂರು ತಲುಪಬಹುದು. ಹಾಗಾಗಿ ನಗರ ವ್ಯಾಪ್ತಿ ವಿಸ್ತಾರ ಮಾಡಿದರೆ ಅನುಕೂಲವಾಗುತ್ತದೆ. ಈಗಾಗಲೇ 14 ಗ್ರಾಮ ಪಂಚಾಯಿತಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ತುಮಕೂರು ನಗರವೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳ್ಳೆಯ ಯೋಜನೆ ರೂಪಿಸಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿದರು. ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿ, ಆದೇಶ ಹೊರಡಿಸಿದೆ. ಬೆಂಗಳೂರು ದಕ್ಷಿಣ ಎಂದ ತಕ್ಷಣ ಅದರ ಸ್ವರೂಪ ಬದಲಾಗುತ್ತದೆ. ಅದೇ ರೀತಿ ತುಮಕೂರು ಜಿಲ್ಲೆಯನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚಿಂತಿಸಲಾಗುವುದು ಎಂದರು.

ಕ್ಯಾತ್ಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ₹5 ಕೋಟಿ ಹಣ ವೆಚ್ಚ ಮಾಡಲಾಗುತ್ತದೆ. ಕೇಂದ್ರದಿಂದ ಅನುಮತಿ ಕೊಡಿಸುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಲಾಗಿದೆ. ಅನುಮತಿ ದೊರೆತರೆ ಆರು ತಿಂಗಳಲ್ಲಿ ಕೆಲಸ ಮುಗಿಯಲಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.