ADVERTISEMENT

ಬರದಲ್ಲೂ ನೆರವಿಗೆ ಬಾರದ ಕೇಂದ್ರ ಸರ್ಕಾರ

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:03 IST
Last Updated 10 ಮೇ 2019, 19:03 IST

ತುಮಕೂರು: ಬರ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರವೇ ಬರ ನಿರ್ವಹಣೆಗೆ ಹಣ ಒದಗಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ರಾಜ್ಯದ 107 ತಾಲ್ಲೂಕುಗಳನ್ನು ಬರ ಎಂದು ಸರ್ಕಾರ ಘೋಷಣೆ ಮಾಡಿದೆ. ಬರದಿಂದ ಅಂದಾಜು ₹ 16,500 ಕೋಟಿ ರಾಜ್ಯಕ್ಕೆ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ₹ 2434 ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇವಲ 949 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಬರದಿಂದ ನಷ್ಟವಾಗಿದ್ದಕ್ಕೆ ನಾವು ಕೇಳಿರಲಿಲ್ಲ. ಆದಾಗ್ಯೂ ಕೇಂದ್ರ ಸ್ಪಂದಿಸಿಲ್ಲ. ಅದೇ ಪಕ್ಕದ ಆಂಧ್ರಪ್ರದೇಶಕ್ಕೆ ₹ 4000 ಕೋಟಿ ನಷ್ಟ ಪರಿಹಾರ ಒದಗಿಸಿದೆ’ ಎಂದು ದೂರಿದರು.

‘ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ತುಮಕೂರು ಜಿಲ್ಲೆಯಲ್ಲಿ ಅಧಿಕಾರಿಗಳು ಬರ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡಿದ್ದಾರೆ. ಸಮರ್ಪಕವಾಗಿ ಮಾಹಿತಿ ನೀಡದ, ನಿರೀಕ್ಷಿತ ರೀತಿ ಕೆಲಸ ಮಾಡದವರಿಗೆ ಎಚ್ಚರಿಕೆ ನೀಡಿದ್ದೇನೆ. ಶುದ್ಧ ನೀರಿನ ಘಟಕಗಳನ್ನು ಪ್ರತಿ ನಿತ್ಯ ಗಮನಿಸಬೇಕು. ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಿಗೆ ವರದಿ ಒದಗಿಸಲು ಸೂಚಿಸಿದ್ದೇನೆ’ ಎಂದರು.

ADVERTISEMENT

‘122 ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. 186 ಖಾಸಗಿ ಕೊಳವೆ ಬಾವಿಗಳನ್ನು ನೀರು ಪೂರೈಕೆಗೆ ಬಾಡಿಗೆ ಪಡೆಯಲಾಗಿದ್ದು, ತಿಂಗಳಿಗೆ ಪ್ರತಿ ಕೊಳವೆ ಬಾವಿಗೆ ₹ 16ರಿಂದ 18 ಸಾವಿರ ಬಾಡಿಗೆ ಕೊಡಲಾಗುತ್ತಿದೆ. ಕುಡಿಯುವ ನೀರಿಗಾಗಿ ಹೊಸದಾಗಿ ಕೊರೆದ ಕೊಳವೆ ಬಾವಿಗೆ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಬರ ಹಿನ್ನೆಲೆಯಲ್ಲಿ 313 ಕೊಳವೆ ಬಾವಿ ಕೊರೆದಿದ್ದು, ಇವುಗಳಲ್ಲಿ ಇನ್ನೂ 70ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.