ADVERTISEMENT

ತಿಪಟೂರು | ಜಕ್ಕನಹಳ್ಳಿ ಶಾಲೆ ದಾಖಲಾತಿ ಜಿಗಿತ

ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಕ್ರೀಡೆಯಲ್ಲಿ ಸಾಧನೆ: ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳಿಂದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 7:14 IST
Last Updated 29 ಜೂನ್ 2025, 7:14 IST
ಜಕ್ಕನಹಳ್ಳಿ ಸರ್ಕಾರಿ ಶಾಲೆ
ಜಕ್ಕನಹಳ್ಳಿ ಸರ್ಕಾರಿ ಶಾಲೆ   

ತಿಪಟೂರು: ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸತತ 14 ವರ್ಷಗಳಿಂದ ಕ್ರೀಡೆಯಲ್ಲಿ ಸಾಧನೆ ಮಾಡುತ್ತ, 2018ರಿಂದ ‘ಮಕ್ಕಳ ಮನೆ’  ಶೀರ್ಷಿಕೆಯಡಿ ಎಲ್‌ಕೆಜಿ, ಯುಕೆಜಿ ಆರಂಭಿಸಿ ದಾಖಲಾತಿ ಹೆಚ್ಚಿಸಿಕೊಂಡಿದೆ. 

ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ಗ್ರಾ.ಪಂ ವ್ಯಾಪ್ತಿಯ ಈ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ 2019ರಲ್ಲಿ ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಬೋರ್ಡ್ ಹಾಗೂ ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ಬಿಳಿಗೆರೆ ಗ್ರಾಮ ಪಂಚಾಯಿತಿಯಿಂದ ಸುಸಜ್ಜಿತ ಆಟದ ಮೈದಾನ, ಗ್ರಾಮೀಣ ಕೂಟ ಆರ್ಥಿಕ ಸಂಸ್ಥೆಯಿಂದ ಎಂಟು ಡೆಸ್ಕ್‌ಗಳನ್ನು ನೀಡಲಾಗಿದೆ.

2018ರಿಂದ ಮಕ್ಕಳ ಮನೆ ತರಗತಿಗಳಿಂದ ಒಂದನೇ ತರಗತಿ ದಾಖಲಾಗುವ ಮೂಲಕ ಪ್ರಸಕ್ತ ಸಾಲಿನಲ್ಲಿ ಒಂದರಿಂದ ಏಳನೇ ತರಗತಿಗೆ 70 ವಿದ್ಯಾರ್ಥಿಗಳು, ಮಕ್ಕಳ ಮನೆ (ಎಲ್‌ಕೆಜಿ, ಯುಕೆಜಿ)ಯಿಂದ 20 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕನ್ನಡ ಮಾದರಿ ಶಾಲೆಯಾದರೂ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡುವ, ಕಲಿಯುವ ಕೌಶಲವನ್ನು ಶಿಕ್ಷಕರು ಕಲಿಸುತ್ತಿದ್ದಾರೆ.

ADVERTISEMENT

2018ರಲ್ಲಿ ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಬರಲು ಮಕ್ಕಳಿಗೆ ಅನುಕೂಲವಾಗುವಂತೆ ಆಟೊ ವ್ಯವಸ್ಥೆ ಮಾಡಿದ್ದಾರೆ. ಜಕ್ಕನಹಳ್ಳಿ, ತಿಗಡನಹಳ್ಳಿ, ಚೌಡ್ಲಾಪುರ ಗ್ರಾಮಗಳಿಂದ ಬರುವ ಮಕ್ಕಳಿಗೆ ಪೋಷಕರ ಸಹಕಾರದಲ್ಲಿ ವಾಹನ ವ್ಯವಸ್ಥೆ ಕೈಗೊಳ್ಳಲಾಗಿದೆ.

ಕಳೆದ ಸಾಲಿನಲ್ಲಿ ಹೋಬಳಿ ಮಟ್ಟದ ಉತ್ತಮ ಶಾಲೆಯೆಂದು ಗುರುತಿಸಿ, ಜಿಲ್ಲಾ ಮಟ್ಟದಲ್ಲಿ ಉತ್ತಮ ಹಿರಿಯ ವಿದ್ಯಾರ್ಥಿ ಸಂಘವೆಂದು ಪ್ರಶಸ್ತಿ ಪಡೆದುಕೊಂಡಿದೆ.

1948ರಲ್ಲಿ ಪ್ರಾರಂಭವಾಗಿರುವ ಜಕ್ಕನಹಳ್ಳಿ ಶಾಲೆಯೊಳಗೆ ಪ್ರವೇಶ ಮಾಡುವಾಗ ಶಾಲೆ ಕಟ್ಟಡದ ಗೋಡೆಗಳಿಗೆ ಹಚ್ಚಿರುವ ಕೆಂಪು ಮತ್ತು ಹಳದಿ ಬಣ್ಣ ಆಕರ್ಷಿಸುತ್ತದೆ. ಇಲ್ಲಿ ಕನ್ನಡ ಮಾಧ್ಯಮದಲ್ಲಿ ಭೋದನೆ ಮಾಡಲಾಗುತ್ತಿದ್ದು, ಇಂಗ್ಲಿಷ್‌ನಲ್ಲಿ ಬೋಧನೆ ಮಾಡಬೇಕು ಎಂದು ಪೋಷಕರ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಕ್ಕನಹಳ್ಳಿ ಶಾಲೆ ಮಕ್ಕಳ ಮನೆಯ ವಿದ್ಯಾರ್ಥಿಗಳು
ಜಕ್ಕನಹಳ್ಳಿ ಶಾಲೆ ವಿಜ್ಞಾನ ಪ್ರಯೋಗಾಲಯ
ಜಕ್ಕನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಮನೆಯ ವಿದ್ಯಾರ್ಥಿಗಳು.
ಶಾಲೆಗೆ ದಾನಿಗಳಿಂದ ಡೆಸ್ಕ್ಗಳ ಕೊಡುಗೆ
ಮಕ್ಕಳು ಕ್ರಿಯಾತ್ಮಕವಾಗಿ ಆಸಕ್ತಿಯಿಂದ ಕಲಿಯುತ್ತಿದ್ದು ಉತ್ತಮ ವಾತಾವರಣದಿಂದ ಕೂಡಿದೆ. ಜಕ್ಕನಹಳ್ಳಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪಠ್ಯಕ್ರಮ ಬೊಧನೆಗೆ ಅನುವು ಮಾಡಿಕೊಟ್ಟರೆ ದಾಖಲಾತಿ ಮತ್ತಷ್ಟು ಹೆಚ್ಚಲಿದೆ
ಶಿವಕುಮಾರ್ ಶಿಕ್ಷಕ
ಗ್ರಾಮಸ್ಥರು ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಸಹಕಾರದಿಂದ ಶಾಲೆ ಉನ್ನತೀಕರಣ ಹೊಂದುತ್ತಿದೆ. ಸರ್ಕಾರ ಇಂಗ್ಲಿಷ್‌ ಮಾಧ್ಯಮ ಬೋಧನೆಗೆ ಅವಕಾಶ ನೀಡಿದರೆ ದಾಖ‌ಲಾತಿ ಹೆಚ್ಚಳವಾಗುತ್ತದೆ
ಎಸ್.ಪಂಚಾಕ್ಷರಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.