ತುಮಕೂರು: ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ (ಜೆಜೆಎಂ) ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಇನ್ನೂ ₹186.23 ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಿಲ್ಲ.
ನಗರದ ಜಿ.ಪಂನಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ನಡೆದ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ವಿಚಾರ ಪ್ರಮುಖವಾಗಿ ಚರ್ಚೆಯಾಯಿತು.
ಜೆಜೆಎಂನಲ್ಲಿ ಜಿಲ್ಲೆಗೆ ಒಟ್ಟು 3,699 ಕಾಮಗಾರಿ ಮಂಜೂರಾಗಿದ್ದು, ಈವರೆಗೆ 1,644 ಕಾಮಗಾರಿಗಳು ಪೂರ್ಣಗೊಂಡಿವೆ. 1,459 ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಈವರೆಗೆ ₹585 ಕೋಟಿಯಷ್ಟೇ ಬಿಡುಗಡೆಯಾಗಿದ್ದು, ಇನ್ನೂ ₹186.23 ಕೋಟಿ ಬಿಡುಗಡೆ ಆಗಬೇಕಿದೆ.
ವಿಷಯ ಪ್ರಸ್ತಾಪಿಸಿದ ಪರಮೇಶ್ವರ, ‘ರಾಜ್ಯ ಸರ್ಕಾರದ ಪಾಲಿನ ಹಣವನ್ನು ಈಗಾಗಲೇ ನೀಡಲಾಗದೆ. ಕೆಲಸ ಪೂರ್ಣಗೊಂಡಿದ್ದರೂ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಕೇಂದ್ರದಿಂದ ಹಣ ಬಾರದೆ ಎಲ್ಲವನ್ನೂ ರಾಜ್ಯ ಸರ್ಕಾರವೇ ಕೊಡುವುದು ಕಷ್ಟಕರವಾಗಲಿದೆ. ಹಣ ಬಿಡುಗಡೆಗೆ ಮುಖ್ಯಮಂತ್ರಿ, ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಹಣ ಬಿಡುಗಡೆಯಾಗದೆ ಎಷ್ಟು ಚರ್ಚೆ ಮಾಡಿದರೂ ಏನೂ ಪ್ರಯೋಜನವಿಲ್ಲ’ ಎಂದು ಹೇಳಿದರು.
ತಿಂಗಳ ಗಡುವು: ಜೆಜೆಎಂ ಯೋಜನೆಯಲ್ಲಿ ಕಾಮಗಾರಿಗಳು ನಿಧಾನವಾಗಿದ್ದು, ಪ್ರಗತಿ ಕುಂಠಿತವಾಗಿದೆ. ಸದ್ಯ ಪ್ರಗತಿಯಲ್ಲಿ ಇರುವ ಕೆಲಸವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಇಇ, ಎಇಇಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕೆಲಸ ಪೂರ್ಣಗೊಳಿಸದಿದ್ದರೆ ಶಿಕ್ಷೆ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಸಿದರು.
ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳ ನಡುವೆ ಸಮನ್ವಯತೆ ಇಲ್ಲದಿರುವುದಕ್ಕೆ ಸಚಿವರು ಸಿಟ್ಟಾದರು. ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಹೋಗುತ್ತಿದ್ದೀರಿ. ನಿಮ್ಮ ನಡವಳಿಕೆ ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಯಾರು ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ‘ಜೆಜೆಎಂ ಯೋಜನೆ 2025ಕ್ಕೆ ಪೂರ್ಣಗೊಂಡಿದೆ. ಇದನ್ನು 2028ರ ವರೆಗೂ ಮುಂದುವರಿಸುವುದಾಗಿ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿಲ್ಲ. ಬಾಕಿ ಹಣ ಬಿಡುಗಡೆ ಮಾಡಿಲ್ಲ’ ಎಂದು ತಿಳಿಸಿದರು.
ಶಾಸಕರಾದ ಬಿ.ಸುರೇಶ್‌ಗೌಡ, ಕೆ.ಷಡಕ್ಷರಿ, ಎಂ.ಟಿ.ಕೃಷ್ಣಪ್ಪ, ಜಿ.ಬಿ.ಜ್ಯೋತಿಗಣೇಶ್ ತಮ್ಮ ಕ್ಷೇತ್ರದಲ್ಲಿ ಜೆಜೆಎಂ ಹಿನ್ನಡೆಯಾಗುವ ವಿಚಾರವನ್ನು ಸಭೆಯ ಗಮನಕ್ಕೆ ತಂದರು.
ಇಒ ವಿರುದ್ಧ ದೂರು: ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಚಿವರ ಗಮನಕ್ಕೆ ತಂದರು. ಇದರಿಂದ ಕೋಪಗೊಂಡ ಸಚಿವರು, ತಾ.ಪಂ ಇಒಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಭಾಗವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಂಜಿನಿಯರ್ ವಿರುದ್ಧ ಎಫ್‌ಐಆರ್ ಜೆಜೆಎಂ ಯೋಜನೆಯಲ್ಲಿ 54 ಕಾಮಗಾರಿಗಳನ್ನು ಮಾಡದೆ ನಾಲ್ವರು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ರವೀಶ್ ವರ್ಗಾವಣೆಯಾಗಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಚಿವ ಜಿ.ಪರಮೇಶ್ವರ ಸೂಚಿಸಿದರು. ಕೆಲಸ ಮಾಡದೆ ಹಣ ಬಿಡುಗಡೆ ಮಾಡಿರುವ ಬಗ್ಗೆ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈವರೆಗೂ ಎಫ್‌ಐಆರ್ ದಾಖಲಿಸದಿರುವುದಕ್ಕೆ ಕಾರ್ಯನಿರ್ವಾಹಕ ಎಂಜಿನಿಯರ್ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕೆಲಸ ಮಾಡದೆ ಹಣ ಪಡೆದುಕೊಂಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ನಿರ್ದೇಶಿಸಿದರು.
ಅನುದಾನಕ್ಕೆ ಸಿಇಒ ಮನವಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಮೂಲಸೌಕರ್ಯ ಯೋಜನೆಯಲ್ಲಿ ₹50 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದು ಅದರಲ್ಲಿ ಸ್ವಲ್ಪ ಹಣವನ್ನು ಶಾಲಾ ಕೊಠಡಿಗಳು ಅಂಗನವಾಡಿ ಕಟ್ಟಡಗಳ ದುರಸ್ತಿ ನಿರ್ಮಾಣಕ್ಕೆ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮನವಿ ಮಾಡಿದರು. ಜಿಲ್ಲೆಯಲ್ಲಿ 3198 ಶಾಲಾ ಕೊಠಡಿಗಳನ್ನು ದುರಸ್ತಿ ಮಾಡಬೇಕಿದ್ದು ನರೇಗಾ ಇತರೆ ಅನುದಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ 1128 ಕೊಠಡಿ ದುರಸ್ತಿ ಮಾಡಲಾಗಿದೆ. ಇನ್ನೂ 2070 ಕೊಠಡಿ ದುರಸ್ತಿಪಡಿಸಬೇಕಿದ್ದು ಅವುಗಳಲ್ಲಿ ಈ ವರ್ಷ 652 ಕೊಠಡಿ ದುರಸ್ತಿ ಮಾಡಲಾಗುತ್ತಿದೆ. ಇನ್ನೂ 1809 ಕೊಠಡಿಗಳನ್ನು ದುರಸ್ತಿ ಮಾಡಬೇಕಿದೆ. ಈಗಾಗಲೇ 360 ಶಾಲಾ ಕೊಠಡಿ ನಿರ್ಮಾಣ ಮಾಡಿದ್ದು ಇನ್ನೂ 394 ಕೊಠಡಿಗಳ ನಿರ್ಮಾಣಕ್ಕೆ ₹53.97 ಕೋಟಿ ಅನುದಾನ ಬೇಕಾಗಿದೆ. ಒಟ್ಟಾರೆಯಾಗಿ ಶಾಲಾ ಕೊಠಡಿಗಳ ದುರಸ್ತಿ ನಿರ್ಮಾಣಕ್ಕೆ ₹99.20 ಕೋಟಿ ಹಣದ ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಅಂಗನವಾಡಿಯ 1019 ಕೇಂದ್ರಗಳನ್ನು ದುರಸ್ತಿ ಮಾಡಿದ್ದು ಉಳಿದ ಕೇಂದ್ರಗಳನ್ನು ಈ ವರ್ಷ ದುರಸ್ತಿ ಮಾಡಲಾಗುತ್ತಿದೆ. ಇನ್ನೂ 182 ಕಟ್ಟಡ ನಿರ್ಮಿಸಬೇಕಿದ್ದು ₹10.92 ಕೋಟಿ ಅನುದಾನದ ಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದರು. ಕಳೆದ ಎರಡು ವರ್ಷಗಳಲ್ಲಿ ಶಾಲೆ ಅಂಗನವಾಡಿ ಕಟ್ಟಡ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಮುಂದಿನ ವರ್ಷಗಳಲ್ಲಿ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಪ್ರಭು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.