ADVERTISEMENT

ತುಮಕೂರು: ಇಮ್ಮಡಗೊಂಡನಹಳ್ಳಿವರೆಗೆ ಹರಿದ ಜಯಮಂಗಲಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:56 IST
Last Updated 24 ಅಕ್ಟೋಬರ್ 2025, 5:56 IST
ಪುರವರ ಹೋಬಳಿಯ ಬ್ಯಾಲ್ಯ ಸಮೀಪ ಜಯಮಂಗಲಿ ನದಿ ಸಣ್ಣದಾಗಿ ಹರಿದಿದೆ
ಪುರವರ ಹೋಬಳಿಯ ಬ್ಯಾಲ್ಯ ಸಮೀಪ ಜಯಮಂಗಲಿ ನದಿ ಸಣ್ಣದಾಗಿ ಹರಿದಿದೆ   

ಕೊಡಿಗೇನಹಳ್ಳಿ: ಈ ಭಾಗದ ರೈತರ ಜೀವನಾಡಿಯಾದ ಜಯಮಂಗಲಿ ನದಿ ಬುಧವಾರ ಪುರವರ ಹೋಬಳಿ ಇಮ್ಮೆಗೊಂಡನಹಳ್ಳಿವರೆಗೆ ಸಣ್ಣದಾಗಿ ಹರಿದಿದ್ದು, ಕೊಡಿಗೇನಹಳ್ಳಿ ಭಾಗದ ಜನರು ನೀರು ಈ ಭಾಗಕ್ಕೂ ಹರಿಯಲಿದೆ ಎಂದು ಖುಷಿಯಿಂದ ಎದುರು ನೋಡುತ್ತಿದ್ದಾರೆ.

ದೇವರಾಯನದುರ್ಗದಲ್ಲಿ ಹುಟ್ಟುವ ಜಯಮಂಗಲಿ ಕೊರಟಗೆರೆ ತಾಲ್ಲೂಕು ಮಧುಗಿರಿ ತಾಲ್ಲೂಕಿನ ಕೋಡಗದಾಲ, ಪುರವರ ಹಾಗೂ ಕೊಡಿಗೇನಹಳ್ಳಿ ಹೋಬಳಿಯ ಬಹುತೇಕ ಪ್ರದೇಶ ಕ್ರಮಿಸಿ ಆಂಧ್ರಪ್ರದೇಶ ಸೇರುತ್ತದೆ. 45 ವರ್ಷಗಳ ಹಿಂದೆ ಮಳೆಗಾಲದಲ್ಲಿ ಆಗಾಗ್ಗೆ ಹರಿಯುತ್ತಿದ್ದ ನದಿ ನಂತರದ ದಿನಗಳಲ್ಲಿ ಮಳೆಯಿಲ್ಲದೆ ಬರ ಆವರಿಸಿದ ಪರಿಣಾಮ ನದಿ ಹಲವು ವರ್ಷ ಬತ್ತಿ ಬರುಡಾಗಿತ್ತು. 2021-22 ಹಾಗೂ 2024ರಲ್ಲಿ ಸುಮಾರು 6ರಿಂದ 7 ತಿಂಗಳು ಹರಿದು ಜೀವಕಳೆ ತಂದಿತ್ತು.

ನದಿಪಾತ್ರದಲ್ಲಿ ಬತ್ತಿಹೋಗಿದ್ದ ಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಯಿತು. 1,100ರಿಂದ 1,000 ಅಡಿ ಇದ್ದ ನೀರು ಇಂದು 100ರಿಂದ 200 ಅಡಿ ಮಟ್ಟಕ್ಕೆ ಏರಿದೆ. ಇನ್ನು ಮೂರ್ನಾಲ್ಕು ವರ್ಷ ಮಳೆ ಬಾರದಿದ್ದರೂ ಕೊಳವೆಬಾವಿಗಳಲ್ಲಿ ಬರುವ ನೀರಿಗೆ ಯಾವುದೇ ತೊಂದರೆಯಿಲ್ಲ. ಆದರೂ ಈ ಬಾರಿ ಮುಂಗಾರು ಆರಂಭದಲ್ಲಿ ಸರಿಯಾಗಿ ಮಳೆಯಾಗದಿದ್ದರೂ, ಹಿಂಗಾರು ಮಳೆ ಬರುತ್ತಿರುವುದರ ಜೊತೆಗೆ ನದಿ ಸಣ್ಣದಾಗಿ ಹರಿಯುತ್ತಿರುವುದು ಈ ಭಾಗದ ರೈತರ ಹಾಗೂ ಜನರಲ್ಲಿ ಸಂತಸ ತಂದಿದೆ. ನದಿ ಮತ್ತೊಮ್ಮೆ ತುಂಬಿ ಹರಿಯುವ ಭರವಸೆ ಇದೆ ಎನ್ನುತ್ತಾರೆ ವೀರನಾಗೇನಹಳ್ಳಿ ರೈತ ತಾರೇಗೌಡ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.