ADVERTISEMENT

ಯಾರ ಹಿತಕ್ಕೆ ಕಾಯ್ದೆಗಳ ತಿದ್ದುಪಡಿ: ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 16:12 IST
Last Updated 20 ಆಗಸ್ಟ್ 2020, 16:12 IST
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿದರು   

ತುಮಕೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ, ಭೂಸುಧಾರಣೆ ಮತ್ತು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿದೆ. ಯಾರಿಗಾಗಿ ಮತ್ತು ಯಾರ ಅನುಕೂಲಕ್ಕಾಗಿ ಈ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದರು.

ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡ ಅವರು, ‘ಕಳೆದ ಒಂದು ವಾರದಿಂದ ಕಾರ್ಯಕರ್ತರು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸುತ್ತಿದ್ದಾರೆ. ಈ ಕಾಯ್ದೆಗಳ ವಿಚಾರವಾಗಿ ಎಲ್ಲೂ ಚರ್ಚೆಯೇ ನಡೆಯಲಿಲ್ಲ’ ಎಂದರು.

‘ಕೈಗಾರಿಕಾ ಬೆಳವಣಿಗೆಗಾಗಿ ಈ ಕಾಯ್ದೆಗಳನ್ನು ಜಾರಿ ಮಾಡಿದ್ದೀರಾ? ಕಾರ್ಮಿಕರು ಮತ್ತು ರೈತರ ಹಿತಕ್ಕಾಗಿ ಜಾರಿಗೊಳಿಸಿದ್ದೀರಾ?’ ಎಂದು ಪ್ರಶ್ನಿಸಿದರು. ಈ ಕಾಯ್ದೆಗಳಿಂದ ರೈತರಿಗೆ, ಕಾರ್ಮಿಕರಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದೆಹಲಿಯಲ್ಲಿರುವ ವ್ಯಾಪಾರಿಗೆ ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಆನ್‌ಲೈನ್‌ನ ಮೂಲಕ ಹಣ ಬರುತ್ತದೆ. ತುಮಕೂರು ಜಿಲ್ಲೆಯ ರೈತರು ಸೇರಿದಂತೆ ಯಾವ ರೈತರಿಗೂ ಹಣ ಬಂದಿದ್ದನ್ನು ನಾನು ಕಂಡಿಲ್ಲ, ಕೇಳಿಲ್ಲ’ ಎಂದು ಗುಡುಗಿದರು.

ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಆರಂಭದಿಂದಲೂ ರೈತರು, ಕಾರ್ಮಿಕರ ವಿಚಾರದಲ್ಲಿ ಹೋರಾಟ ನಡೆಸುತ್ತಲೇ ಬಂದಿದೆ. ಮುಂದೆಯೂ ರೈತರ ಪರವಾಗಿ ನಿಲ್ಲಲ್ಲಿದೆ ಎಂದರು.

ಕಾಯ್ದೆ ತಿದ್ದುಪಡಿಯಿಂದ ಮಾಫಿಯಾದವರಿಗೆ ಮತ್ತು ಭ್ರಷ್ಟಾಚಾರ ದಿಂದ ಕಪ್ಪು ಹಣ ಮಾಡಿರುವವರಿಗೆ ಅನುಕೂಲ ಆಗಲಿದೆ. ಅವರು ಬಡ ರೈತರ ಜಮೀನು ಖರೀದಿಸುತ್ತಾರೆ. ಎ.ಟಿ.ರಾಮಸ್ವಾಮಿ ವರದಿ ಅನ್ವಯ ಒತ್ತುವರಿ ಎಂದು ಗುರುತಿಸಿರುವ ಸುಮಾರು 45 ಸಾವಿರ ಎಕರೆ ಪ್ರದೇಶವು ಉಳ್ಳವರ ಪಾಲಾಗಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್, ‘ಜೆಡಿಎಸ್ ಪಕ್ಷವನ್ನು ರೈತರು, ಕಾರ್ಮಿಕರು, ಬಡವ ರಿಂದ ದೇವೇಗೌಡರು ಕಟ್ಟಿ ಬೆಳೆಸಿದ್ದಾರೆ. ರೈತರು ಸಂಕಷ್ಟದ ಲ್ಲಿರುವಾಗ ತಮ್ಮ ವಯಸ್ಸು ಲೆಕ್ಕಿಸದೆ ಹೋರಾಟಕ್ಕೆ ಇಳಿದಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.

ಶಾಸಕರಾದ ಎಂ.ವಿ.ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಬೆಮಲ್ ಕಾಂತರಾಜು, ಜಿ.ಪಂ ಅಧ್ಯಕ್ಷೆ ಲತಾ ರವಿಕುಮಾರ್, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಎಂ.ಟಿ.ಕೃಷ್ಣಪ್ಪ, ಎಚ್.ನಿಂಗಪ್ಪ, ಸುಧಾಕರಲಾಲ್, ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಮುಖಂಡರಾದ ಎ.ಗೋವಿಂದರಾಜು, ಬೆಳ್ಳಿಲೋಕೇಶ್, ತಾಹೀರಾ ಬೇಗಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗೌಡರಿಂದ ದೂರ ಉಳಿದ ಶ್ರೀನಿವಾಸ್, ಸುರೇಶ್‌ಬಾಬು

ಗುಬ್ಬಿ ಶಾಸಕ ಎಸ್‌.ಆರ್.ಶ್ರೀನಿವಾಸ್, ಪ್ರತಿಭಟನೆ ಮತ್ತು ಸತ್ಯನಾರಾಯಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ನಾನಾ ಊಹಾ‍ಪೋಹಕ್ಕೆ ಕಾರಣವಾಗಿದೆ.

ಶಾಸಕರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ. ಈ ಕಾರಣದಿಂದ ಅವರು ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಜೆಡಿಎಸ್ ಮುಖಂಡರು ಮಾತನಾಡುತ್ತಿದ್ದರು. ಅವರ ಕುಟುಂಬ ಸದಸ್ಯರಿಗೆ ಸೋಂಕು ತಗುಲಿ ವಾರಕ್ಕೂ ಹೆಚ್ಚು ಸಮಯ ಆಗಿದೆ. ‌ಹೀಗಿದ್ದ ಮೇಲೆ ಶ್ರೀನಿವಾಸ್ ಪಾಲ್ಗೊಳ್ಳಬಹುದಿತ್ತು ಎನ್ನುವ ಚರ್ಚೆಯೂ ಜೆಡಿಎಸ್ ಜಿಲ್ಲಾ ಕಚೇರಿ ಆವರಣದಲ್ಲಿ ಕೇಳಿ ಬಂತು.

ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಸಹ ಗೈರಾಗಿದ್ದರು. ಶ್ರೀನಿವಾಸ್ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎನ್ನುವ ಅನುಮಾನ ಆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ.

35 ವರ್ಷದ ನಂಟು

‘ಶಾಸಕರಾಗಿದ್ದ ಬಿ.ಸತ್ಯನಾರಾಯಣ ಮತ್ತು ನನ್ನದು 30 ವರ್ಷಕ್ಕೂ ಹೆಚ್ಚಿನ ನಂಟು. ಎಂದಿಗೂ ತಾನು ನಂಬಿರುವ ತತ್ವ ಸಿದ್ಧಾಂತಗಳಿಗೆ ದ್ರೋಹ ಬಗೆಯದೆ, ಸೈದ್ಧಾಂತಿಕ ನಿಲುವಿನ ವ್ಯಕ್ತಿಯಾಗಿದ್ದರು. ನನಗೆ ನಾಲ್ಕು ದಿನಗಳಿಂದ ಮಂಡಿ ನೋವು ಇದೆ. ಇಂತಹ ಇಳಿವಯಸ್ಸಿನಲ್ಲಿಯೂ ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಸತ್ಯನಾರಾಯಣ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುತ್ತೇನೆ’ ಎಂದು ದೇವೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.