ADVERTISEMENT

‘ಎಪಿಎಂಸಿ ಕಾಯ್ದೆ ತಿದ್ದುಪಡಿ: ರೈತರಿಗೆ ಅನುಕೂಲ’

ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಸ್‌ ಬಸವರಾಜ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:14 IST
Last Updated 2 ಜೂನ್ 2020, 12:14 IST
ಜಿ.ಎಸ್‌. ಬಸವರಾಜ್‌
ಜಿ.ಎಸ್‌. ಬಸವರಾಜ್‌   

ತುಮಕೂರು: ‘ಎಪಿಎಂಸಿ ಕಾಯ್ದೆ ತಿದ್ದುಪಡಿಯು ರೈತರ ಪಾಲಿಗೆ ಸಂಜೀವಿನಿಯಾಗಲಿದೆ’ ಎಂದು ಸಂಸದ ಜಿ.ಎಸ್‌.ಬಸವರಾಜ್‌ ಮಂಗಳವಾರ ಸಮರ್ಥಿಸಿಕೊಂಡರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೃಷಿ ಕ್ಷೇತ್ರದ ಭವಿಷ್ಯ ಉಜ್ವಲಗೊಳಿಸಲು, ದೇಶದ ಆರ್ಥಿಕತೆಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಎಪಿಎಂಸಿ ಕಾಯ್ದೆ ತಿದ್ದುಪಡಿಯಂತಹ ಸುಧಾರಣಾ ಕ್ರಮ ಸದ್ಯದ ಅಗತ್ಯವಾಗಿತ್ತು’ ಎಂದರು.

ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ‘ಒನ್‌ ನೇಷನ್‌ ಒನ್‌ ರೇಷನ್‌’ ಯೋಜನೆ ಮೂಲಕ ವಲಸೆ ಕಾರ್ಮಿಕರು ಒಂದೇ ಪಡಿತರ ಚೀಟಿ ಬಳಸಿ ಯಾವುದೇ ರಾಜ್ಯದ ಪಡಿತರ ಅಂಗಡಿಯಲ್ಲಿ ಆಹಾರ ಧಾನ್ಯ ಪಡೆಯಲು ಅವಕಾಶ ನೀಡಿದೆ. ಇದರಿಂದ ಕಾರ್ಮಿಕರಿಗೆ ಅನುಕೂಲವಾಗಲಿದೆ. ಅಯೋಧ್ಯೆ ವಿವಾದಾತ್ಮಕ ನಿವೇಶನದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ನಂತರ ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದೆ ಎಂದು ಹೇಳಿದರು.

ADVERTISEMENT

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗೆ ಮರಣ ದಂಡನೆ ನೀಡುವ ಕಾಯ್ದೆ ಜಾರಿ, ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಕ್ಕೆ ಕಾರಣವಾಗುತ್ತಿದ್ದ ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ಹಕ್ಕಿನ ರಕ್ಷಣೆಗೆ ಬದ್ಧವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಕಾಶ್ಮೀರದ ವಿಶೇಷಾಧಿಕಾರ ಮೊಟಕು, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಂಮರಿಗೆ ಯಾವುದೇ ತೊಂದರೆಯಾಗದಿದ್ದರೂ, ವಿರೋಧ ಪಕ್ಷ ಅನಗತ್ಯವಾಗಿ ಅಪಪ್ರಚಾರ ಮಾಡಿತು. ಆದಾಗ್ಯೂ ಕೇಂದ್ರ ಸಮರ್ಥವಾಗಿ ನಿಭಾಯಿಸಿತು ಎಂದು ಅವರು ಅಭಿಪ್ರಾಯಪಟ್ಟರು.

ಕೊರೊನಾ ಲಾಕ್‌ಡೌನ್‌ನಿಂದ ಕೆಂಗೆಟ್ಟ ದೇಶದ ಅರ್ಥವ್ಯವಸ್ಥೆಗೆ ₹ 20 ಲಕ್ಷ ಕೋಟಿ ಪ್ಯಾಕೇಜ್‌ ಮೂಲಕ ಆರ್ಥಿಕ ಚೇತರಿಕೆ ನೀಡಲಾಗಿದೆ. ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿ, ಭಾರತದ ಸಂಸ್ಕೃತಿ, ಚಿಕಿತ್ಸಾ ವಿಧಾನಗಳನ್ನು ವಿಶ್ವಕ್ಕೆ ಪರಿಚಯಿಸಲು ಪ್ರಯತ್ನಿಸಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಬ್ಬಾಕ ರವಿಶಂಕರ್‌, ಲಕ್ಷ್ಮೀಶ್‌, ರಂಗನಾಯಕ,ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್‌, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್‌, ಗಂಗಹನುಮಯ್ಯ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.