ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಜುಂಜಪ್ಪನ ಕಾವ್ಯದಲ್ಲಿ ಪಶುಪಾಲನೆ ಮತ್ತು ಗಣೆಪದ’ ಕುರಿತ ವಿಚಾರ ಸಂಕಿರಣವನ್ನು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಉದ್ಘಾಟಿಸಿದರು.
ತುಮಕೂರು: ವೃತ್ತಿಯ ಗೌರವ ಎತ್ತಿ ಹಿಡಿದು ಗೋವಿನ ಪಾಲನೆ, ರಕ್ಷಣೆಯ ಮುಖಾಂತರ ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದವರು ಜುಂಜಪ್ಪ ಎಂದು ಜನಪದ ವಿದ್ವಾಂಸ ಮಲ್ಲಿಕಾರ್ಜುನ ಕಲಮರಹಳ್ಳಿ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದಲ್ಲಿ ಬುಧವಾರ ಜುಂಜಪ್ಪ ಅಧ್ಯಯನ ಪೀಠ, ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಜುಂಜಪ್ಪನ ಕಾವ್ಯದಲ್ಲಿ ಪಶುಪಾಲನೆ ಮತ್ತು ಗಣೆಪದ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಗಣೆಪದ, ಕಾವ್ಯಗಳ ಮೂಲಕ ಗೋಪಾಲನೆಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ನೆಲ ಮೂಲ ಸಂಸ್ಕೃತಿಯನ್ನು ಸಮಾಜಕ್ಕೆ ಸಾರಿದ ಜುಂಜಪ್ಪ ತಳ ಸಮುದಾಯದ ಧ್ವನಿಯಾಗಿದ್ದರು. ಗೋವಿನ ರಕ್ಷಣೆಯಲ್ಲಿ ಯುದ್ಧಗಳಾಗಿದ್ದನ್ನು ಇತಿಹಾಸ ಉಲ್ಲೇಖಿಸುತ್ತದೆ. ಗೋಪಾಲಕರು ಜೀವತೆತ್ತು ಗೋವುಗಳನ್ನು ರಕ್ಷಿಸಿ ಪೂಜೆಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.
ಪ್ರಾಚೀನ 30 ಕಾವ್ಯಗಳಲ್ಲಿ ಗೊಲ್ಲ ಸಮುದಾಯದ ಕುರಿತು ಪ್ರಸ್ತಾಪವಾಗಿದೆ. ಗೋಪಾಲಕರು ಭೌಗೋಳಿಕ ಅನ್ವೇಷಕರಾಗಿ, ಪಾರಂಪರಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ನದಿ, ಕಾಡುಗಳ ವಿಸ್ತಾರವನ್ನು ಅನ್ವೇಷಿಸುವುದರ ರಾಯಭಾರಿಗಳಂತೆ ಇದ್ದರು. ಜುಂಜಪ್ಪ 12 ವರ್ಷ ಕುಟುಂಬ ತೊರೆದು ಗೋವುಗಳ ರಕ್ಷಣೆಯಲ್ಲಿ ಜೀವನ ಸವೆಸಿದ್ದರು. ಗೋಪಾಲನೆಯ ಬದುಕಿನ ಅನುಭವಗಳನ್ನು ಕಾವ್ಯ ರೂಪವಾಗಿಸಿ, ಪಾರಂಪರಿಕ ಪಶುಪಾಲನ ನಿರ್ವಹಣೆಯ ಸಾಂಸ್ಕೃತಿಕ ತೂಗು ತೊಟ್ಟಿಲಾದರು ಎಂದು ತಿಳಿಸಿದರು.
ನಿವೃತ್ತ ಅರಣ್ಯಾಧಿಕಾರಿ ಬಿ.ಚಿಕ್ಕಪ್ಪಯ್ಯ, ‘ದೇಶದ 13 ಜಿಲ್ಲೆಗಳ 41 ತಾಲ್ಲೂಕುಗಳಲ್ಲಿ 1,500 ಹಟ್ಟಿಗಳಲ್ಲಿ ಗೊಲ್ಲರು ವಾಸವಿದ್ದಾರೆ. ರಾಜ್ಯದ 38 ತಾಲ್ಲೂಕುಗಳಲ್ಲಿ 1,269 ಹಟ್ಟಿಗಳಿವೆ’ ಎಂದು ಮಾಹಿತಿ ಹಂಚಿಕೊಂಡರು.
‘ಜುಂಜಪ್ಪನ ಕಾವ್ಯದಲ್ಲಿ ಬಡಮೈಲ’ ಎಂಬ ವಿಷಯದ ಕುರಿತು ವಿ.ವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಪ್ರಬಂಧ ಮಂಡಿಸಿದರು. ರಾಮಯ್ಯ ಹಾಗೂ ತಂಡದವರಿಂದ ಗಣೆಪದ ಗಾಯನ ನಡೆಯಿತು. ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕಥೆಗಾರ ಜಿ.ವಿ.ಆನಂದಮೂರ್ತಿ, ವಿ.ವಿ ಜುಂಜಪ್ಪ ಅಧ್ಯಯನ ಪೀಠದ ಸಂಯೋಜಕ ಎಸ್.ಶಿವಣ್ಣ ಬೆಳವಾಡಿ, ಸಹಾಯಕ ಪ್ರಾಧ್ಯಾಪಕಿ ಎಚ್.ಆರ್.ರೇಣುಕಾ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.