ADVERTISEMENT

ತುಮಕೂರು: ಕಲ್ಪೋತ್ಸವಕ್ಕೆ ಮೆರುಗು ತಂದ ಮಹಿಳಾ ಬೈಕ್ ರ‍್ಯಾಲಿ

ಸ್ಥಳೀಯ ರೈತರಿಂದ ತೆಂಗು ಉತ್ಪನ್ನ, ಕರಕುಶಲ ವಸ್ತು ಪ್ರದರ್ಶನ: ಅಲಂಕಾರಗೊಂಡ ನಗರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:16 IST
Last Updated 20 ನವೆಂಬರ್ 2025, 2:16 IST
ಕಲ್ಪತರು ಕ್ರೀಡಾಂಗಣದಲ್ಲಿ ಕಲ್ಪೋತ್ಸವಕ್ಕೆ ಚಾಲನೆ ನೀಡಲಾಯಿತು
ಕಲ್ಪತರು ಕ್ರೀಡಾಂಗಣದಲ್ಲಿ ಕಲ್ಪೋತ್ಸವಕ್ಕೆ ಚಾಲನೆ ನೀಡಲಾಯಿತು   

ತಿಪಟೂರು: ಕಲ್ಪೋತ್ಸವದ ಮೊದಲನೇ ದಿನವಾದ ಬುಧವಾರ ನಗರದ ಕೆಂಪಮ್ಮ ದೇವಸ್ಥಾನದಿಂದ ಕಲ್ಪತರು ಕ್ರೀಡಾಂಗಣದವರೆಗೆ ಇನ್ನೂರಕ್ಕೂ ಹೆಚ್ಚು ಮಹಿಳೆಯರು ಬೈಕ್ ರ‍್ಯಾಲಿ ನೆಡಸಿದರು.

ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ತೆಂಗು ಮತ್ತು ವಸ್ತು ಪ್ರದರ್ಶನವನ್ನು ಶಾಸಕ ಕೆ.ಷಡಕ್ಷರಿ, ಕಲಾಕೃತಿ ಸಂಸ್ಥೆ ಅಧ್ಯಕ್ಷ ಡಾ.ಶ್ರೀಧರ್, ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ, ಡಿವೈಎಸ್‌ಪಿ ಜಯಲಕ್ಷಿಸದಾಶಿವು ಹಾಗೂ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷ ಕೆ.ಎಮ್.ರಾಜಣ್ಣ ಉದ್ಘಾಟಿಸಿದರು.

ಸ್ಥಳೀಯ ರೈತರಿಂದ ಹಿಡಿದು ಪ್ರಾದೇಶಿಕ ಉತ್ಪನ್ನಗಳವರೆಗೆ, ತೆಂಗು ಉತ್ಪನ್ನ, ಕರಕುಶಲ ವಸ್ತುಗಳ ಪ್ರದರ್ಶನ, ಕೃಷಿ ಉಪಕರಣ, ಕೈಗಾರಿಕೆ ಯಂತ್ರೋಪಕರಣ, ಗೃಹ ಬಳಕೆ ವಸ್ತುಗಳ ಪ್ರದರ್ಶನ, ಇಲಾಖೆಗಳ ಸವಲತ್ತು ಹಾಗೂ ಸೂಗೂರು ಗ್ರಾಮದ ಜೋಡಿ ಎತ್ತು ವಿಶೇಷ ಆಕರ್ಷಣೆಯಾಗಿತ್ತು. ಆರೋಗ್ಯ ಶಿಬಿರ, ನಂದಿನಿ ಉತ್ಪನ್ನಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು.

ADVERTISEMENT

ಯುವ ಸಂಭ್ರಮ ವತಿಯಿಂದ ಆಶು ಭಾಷಣ, ಚರ್ಚಾ ಸ್ಪರ್ಧೆ ನಡೆಯಿತು. ಚರ್ಚಾ ಸ್ಪರ್ಧೆಯಲ್ಲಿ ‘ನಮ್ಮ ದೃಷ್ಟಿಕೋನದಲ್ಲಿ ಅಂದು-ಇಂದು’ ವಿಷಯಕ್ಕೆ ಮಕ್ಕಳಿಂದ ಮಂಡನೆ ನಡೆದು ‘ಅಂದು’ ವಿಷಯಕ್ಕೆ ಕಲ್ಪತರು ಸೆಂಟ್ರಲ್ ಶಾಲೆಯ ನಿಹಾರಿಕ ಪ್ರಥಮ, ಕೆಪಿಎಸ್ ಶಾಲೆಯ ಪ್ರೇರಿತ ದ್ವಿತೀಯ, ಸಹನ ಕೆ.ಬಿ. ತೃತೀಯ ಸ್ಥಾನ ಪಡೆದರು. ‘ಇಂದು’ ವಿಷಯಕ್ಕೆ ಸಯಿದಾಮದೀ ಉನ್ನಿಸಾ ಪ್ರಥಮ, ಸೌಜನ್ಯ ದ್ವಿತೀಯ, ಹರ್ಷಿಲ್ ಹಾದಿಮನೆ ತೃತೀಯ ಸ್ಥಾನ ಪಡೆದರು.

ಆಶು ಭಾಷಣ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ರೋಹಿತ್ ಪಿ. ಪ್ರಥಮ, ಸೃಜನ ದ್ವಿತೀಯ, ಹರ್ಷಿತ ತೃತೀಯ ಸ್ಥಾನ ಪಡೆದು, ಪ್ರೌಢಶಾಲಾ ವಿಭಾಗದಲ್ಲಿ ವರ್ಷ ಪ್ರಥಮ, ಸೌಜನ್ಯ ಕೆ. ದ್ವಿತೀಯ, ಆದ್ವಿ ತೃತೀಯ ಸ್ಥಾನ ಪಡೆದರು.

ನಗರದ ಪ್ರಮುಖ ರಸ್ತೆ ಬದಿಯಲ್ಲಿರುವ ಮರಗಿಡಗಳಿಗೆ ವಿವಿಧ ಬಣ್ಣಗಳನ್ನು ಹಚ್ಚಿ, ಗೋಡೆಗಳಿಗೆ ಸ್ವಚ್ಛತೆಯ ಬರಹಗಳನ್ನು ಬರೆಸಿ ಅಲಂಕರಿಸಿ, ವಿದ್ಯುತ್ ಕಂಬಗಳಿಗೆ ವಿಶೇಷ ದೀಪಾಲಂಕಾರದೊಂದಿಗೆ ಕೇಸರಿ ಬಟ್ಟೆ ಹಾಗೂ ಕೇಸರಿ ಧ್ವಜಗಳನ್ನು ಕಟ್ಟಿ, ನಗರದ ಕಲ್ಲೇಶ್ವರ ದೇವಾಲಯದ ಬಳಿ ಬೃಹತ್ ಹನುಮ ದ್ವಾರವನ್ನು ನಿರ್ಮಿಸಲಾಗಿದೆ. ಅಮಾನಿಕೆರೆಯ ಕಲ್ಯಾಣಿಯನ್ನು ಸುಂದರಗೊಳಿಸಲಾಗಿದೆ.

ಕಲ್ಪೋತ್ಸವದಲ್ಲಿ ಮಹಿಳೆಯರ ಬೈಕ್ ರ‍್ಯಾಲಿ

ಇಂದು ಅಂಬಾರಿ ಉತ್ಸವ

ಕಲ್ಪೋತ್ಸವ ಎರಡನೇ ದಿನವಾದ ಗುರುವಾರ ನಗರದ ಕೆಂಪಮ್ಮ ದೇವಾಸ್ಥಾನದಿಂದ ಕಲ್ಪತರು ಕ್ರೀಡಾಂಗಣದವರೆಗೆ ಅಂಬಾರಿ ಉತ್ಸವ ನಡೆಯಲಿದೆ. ಕುದುರೆ ಎತ್ತು ಎತ್ತಿನ ಗಾಡಿ ನಗಾರಿ ನಂದಿಧ್ವಜ ಕುಣಿತ ವೀರಗಾಸೆ ಸೋಮನ ಕುಣಿತ ಹುಲಿವೇಷ ನಾನಾ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ ಎಂದು ಉಪ ವಿಭಾಗಾಧಿಕಾರಿ ಸಪ್ತಶ್ರೀ ತಿಳಿಸಿದ್ದಾರೆ.

ಅಂಬಾರಿ ಮೆರವಣಿಗೆ ಪ್ರಯುಕ್ತ ಶಿವಮೊಗ್ಗ ಮತ್ತು ಹಾಸನ ಮಾರ್ಗದಿಂದ ಬರುವ ವಾಹನಗಳನ್ನು ಅಂಬೇಡ್ಕರ್ ವೃತ್ತದಿಂದ ಗೋವಿನಪುರ ಮಾರ್ಗವಾಗಿ ಬೈಪಾಸ್ ಮೂಲಕ ಬೆಂಗಳೂರು ರಸ್ತೆಗೆ ಬೆಂಗಳೂರು ಮತ್ತು ತುರುವೇಕೆರೆ ಮಾರ್ಗದಿಂದ ಬರುವ ವಾಹನಗಳನ್ನು ನಗರದ ಅಮಾನಿಕೆರೆ ಕೆರೆ ಏರಿ ಮಾರ್ಗವಾಗಿ ಶಿವಮೊಗ್ಗ ಮತ್ತು ಹಾಸನ ರಸ್ತೆಗೆ ತಲುಪುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಡಿವೈಎಸ್‌ಪಿ ಜಯಲಕ್ಷಮ್ಮ ತಿಳಿಸಿದ್ದಾರೆ.

ಗಮನಸೆಳೆದ ಸೂಗೂರು ಗ್ರಾಮದ ಎತ್ತುಗಳು
ಕರಕುಶಲ ಮಣ್ಣಿನ ಪದಾರ್ಥಗಳ ಮಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.