ತುಮಕೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಪರಿಷತ್ತಿನ ಸಂಸ್ಥಾಪನಾ ದಿನವನ್ನು ಮಂಗಳವಾರ ಆಚರಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು’ ಎಂದರು.
ಕನ್ನಡ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಪತ್ರಿಕೆಗಳನ್ನು ಕೊಂಡು ಓದುವ, ಪುಸ್ತಕಗಳನ್ನು ಖರೀದಿಸುವ ಕಡೆಗೆ ಗಮನ ಹರಿಸಬೇಕು. ಆ ಮೂಲಕ ಕನ್ನಡ ಮತ್ತು ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಗೋವಿಂದಯ್ಯ, ‘ಈಗ ಹೋಬಳಿ ಮಟ್ಟದಲ್ಲೂ ಪರಿಷತ್ತು ಶಾಖೆಗಳು ರಚನೆಯಾಗಿವೆ. ಹೊರ ರಾಜ್ಯಗಳಲ್ಲೂ ಘಟಕಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲವೂ ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ’ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ಪ್ರಾಂಶುಪಾಲ ರವಿಕುಮಾರ್ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಕುರಿತು ಮಾತನಾಡಿದರು. ಕಸಾಪ ಕಾರ್ಯದರ್ಶಿ ರಾಕ್‍ಲೈನ್ ರವಿಕುಮಾರ್, ಪ್ರದೀಪ್ ಕುಮಾರ್, ಪಾರ್ವತಮ್ಮ, ಗುರುಪ್ರಸಾದ್, ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.