
ತಿಪಟೂರು: ಗ್ರಾಮದೇವತೆ ಕೆಂಪಮ್ಮ ದೇವಿ ಜಾತ್ರೆ ಅಂಗವಾಗಿ ಭಾನುವಾರ ಮಳೆಯ ನಡುವೆ ರಥೋತ್ಸವ ನೆರವೇರಿತು.
ಮೇ 14ರಿಂದ 18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಾನುವಾರ ರಥೋತ್ಸವ ನಡೆಯಿತು. ರಾತ್ರಿ ಸಿಡಿ ಉತ್ಸವ, ಉಯ್ಯಾಲೆ ಉತ್ಸವ ನಡೆಯಿತು.
ರಥಕ್ಕೆ ಭಕ್ತರು ಬಾಳೇಹಣ್ಣು, ತೆಂಗಿನಕಾಯಿ, ಮೆಣಸು, ಹಣವನ್ನು ಅರ್ಪಿಸಿದರು. ಯುವಕರು ಬಾಳೆಹಣ್ಣಿನ ಮೇಲೆ ‘ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಲಿ’ ಎಂಬ ಬರಹಗಳನ್ನು ಬರೆದು ರಥಕ್ಕೆ ಅರ್ಪಿಸಿದರು.
ರಥೋತ್ಸವದಲ್ಲಿ ಧೂತರಾಯನ ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿದ್ದು ಜಾತ್ರೆಯ ಮೆರುಗು ಹೆಚ್ಚಿಸಿತು.
ರಥೋತ್ಸವ ಅಂಗವಾಗಿ ಭಾನುವಾರ ಲೋಕೇಶ್ವರ ಅಭಿಮಾನಿ ಬಳಗ, ಕೋಡಿ ಸರ್ಕಲ್, ಅರಳೀಕಟ್ಟೆ ಸಿದ್ಧಿವಿನಾಯಕ ಸೇವಾ ಸಂಘದಿಂದ ಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ತಾಲ್ಲೂಕು ಆಡಳಿತದಿಂದ ಅನುಮತಿ ದೊರೆಯದ ಕಾರಣ ಅನ್ನಸಂತರ್ಪಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮಾಜಿ ಸಚಿವ ಬಿ.ಸಿ.ನಾಗೇಶ್, ದೇಗುಲ ಸಮಿತಿಯ ಚಂದ್ರಶೇಖರ್, ಶ್ರೀಕಂಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.