ತುಮಕೂರು: ಕೆಂಪೇಗೌಡರು 16ನೇ ಶತಮಾನದಲ್ಲಿಯೇ 65ಕ್ಕೂ ಹೆಚ್ಚು ಪೇಟೆ, 100ಕ್ಕೂ ಹೆಚ್ಚು ಕೆರೆ ನಿರ್ಮಿಸಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಸಾಮಾಜಿಕ ಬಲವರ್ಧನೆಗೆ ಭದ್ರ ಬುನಾದಿ ಹಾಕಿದರು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಅಭಿಪ್ರಾಯಪಟ್ಟರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಈಗ ಬೆಂಗಳೂರು ಉದ್ಯಾನ ನಗರಿ, ತಂತ್ರಜ್ಞಾನ ನಗರಿ, ಉದ್ಯಮಗಳ ಕೇಂದ್ರವಾಗಿ ಲಕ್ಷಾಂತರ ಜನರಿಗೆ ಬದುಕು ನೀಡಿದೆ. ಅವರ ಜನಪರವಾದ ಆಡಳಿತ ನೀತಿ, ಜಾತ್ಯತೀತ ನಿಲುವು ಇಂದಿನ ರಾಜಕಾರಣಿಗಳಿಗೆ ಮಾದರಿ ಆಗಬೇಕು ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ‘ಕೆಂಪೇಗೌಡರು ಸಾಮಾಜಿಕ ನ್ಯಾಯದ ಹರಿಕಾರರು. ಎಲ್ಲ ವರ್ಗದವರಿಗೂ ಶಾಂತಿ, ಸೌಹಾರ್ದತೆಯಿಂದ ಬಾಳಲು ಅವಕಾಶ ಕಲ್ಪಿಸಿದ್ದರು. ಮಹನೀಯರನ್ನು ಎಲ್ಲ ಜಾತಿಯವರು ಗೌರವಿಸಬೇಕು’ ಎಂದು ಸಲಹೆ ಮಾಡಿದರು.
ಮಾಜಿ ಶಾಸಕ ಎಚ್.ನಿಂಗಪ್ಪ, ರಾಜ್ಯ ಘಟಕದ ಉಪಾಧ್ಯಕ್ಷ ಗಂಗಣ್ಣ, ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಪದಾಧಿಕಾರಿಗಳಾದ ಸೋಲಾರ್ ಕೃಷ್ಣಮೂರ್ತಿ, ರಾಮಕೃಷ್ಣಪ್ಪ, ಟಿ.ಎಚ್.ಬಾಲಕೃಷ್ಣ, ಧರಣೇಂದ್ರಕುಮಾರ್, ಎಚ್.ಡಿ.ಕೆ.ಮಂಜುನಾಥ್, ಮುಖಂಡರಾದ ಯೋಗಾನಂದಕುಮಾರ್, ಕಳ್ಳಿಪಾಳ್ಯ ಲೋಕೇಶ್, ಕೆಂಪರಾಜು, ಎಲ್.ಟಿ.ಗೋವಿಂದರಾಜು, ಮಂಡಿ ಚಂದ್ರ, ಮಧುಗೌಡ, ದಿವಾಕರ್, ತಾಹೇರಾ ಕುಲ್ಸಂ, ಯಶೋದ, ಜಯಲಕ್ಷ್ಮಿ, ರಿಯಾಜ್ ಅಹ್ಮದ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.