ADVERTISEMENT

ಸುಂದರ ಈ ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲೆ

ಕೃಷ್ಣಯ್ಯನಪಾಳ್ಯ ಶಾಲೆ ಶಿಕ್ಷಕರು, ಗ್ರಾಮಸ್ಥರ ಕಾಳಜಿ, ಶ್ರಮದ ಪ್ರತಿಫಲ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:34 IST
Last Updated 7 ಸೆಪ್ಟೆಂಬರ್ 2025, 8:34 IST
ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲೆ
ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲೆ   

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಕಸಬಾ ಹೋಬಳಿ ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲೆಯ ಶಾರದದೇವಿ ದೇಗುಲ, ಸುಂದರ ಪರಿಸರದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ನೋಡುಗರನ್ನು ಹುಬ್ಬೇರಿಸುತ್ತದೆ.

ಕೃಷ್ಣಯ್ಯನಪಾಳ್ಯ ಯಾವುದೇ ಬಸ್ ಸೌಕರ್ಯವಿಲ್ಲದ ಕುಗ್ರಾಮ. 1989ರಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಶಾಲೆ ಮೊದಲಿಗೆ ಹೆಂಚಿನ ಕೊಠಡಿ ಇತ್ತು. ಜೊತೆಗೆ ಯಾವುದೇ ಮೂಲ ಸೌಲಭ್ಯಗಳನ್ನು ಹೊಂದಿರಲಿಲ್ಲ. ಆದರೆ 1998ರಲ್ಲಿ ಶಿಕ್ಷಕರಾಗಿ ಬಂದ ಎಸ್.ಸಿ. ಗಂಗಾಧರಯ್ಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗ್ರಾಮಸ್ಥರ ಪ್ರೀತಿ-ವಿಶ್ವಾಸಗಳಿಸುವುದರ ಮೂಲಕ ಶಾಲೆಗೆ ಎಲ್ಲ ಮೂಲಸೌಕರ್ಯ ಕಲ್ಪಿಸಿದರು. ನಂತರ ಈ ಗ್ರಾಮದಲ್ಲಿ ಯಾವುದೇ ದೇವಸ್ಥಾನ ಇಲ್ಲದ ಕಾರಣ ಗ್ರಾಮಸ್ಥರ ಸಹಕಾರದಿಂದ ಶಾಲಾ ಆವರಣದಲ್ಲಿ ಶಾರದಾದೇವಿ ಹಾಗೂ ವಿನಾಯಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು.

2016ರಲ್ಲಿ ರಾಜಮ್ಮ ಹಾಗೂ ಮುನಿವೆಂಕಟಪ್ಪ ಅವರಿಂದ ಸಭಾವೇದಿಕೆ ನಿರ್ಮಾಣ, ಎಸ್.ಡಿ.ಎಮ್.ಸಿ. ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ಶಾಲಾ ಮುಂಭಾಗ ಹಾಗೂ ಶಾಲಾ ಆವರಣದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದಾರೆ. ಬರುಡಾಗಿದ್ದ ಶಾಲಾ ಆವರಣದಲ್ಲಿ ತೆಂಗು 12, ಅಡಿಕೆ 80, ನುಗ್ಗೆ 5, ಎಳ್ಳಿಕಾಯಿ 5, ನೇರಳೆ 2, ಕಬ್ಬು, ಬಾಳೆ 10, ವಿವಿಧ ಬಗೆಯ 20 ಹೂವಿನ ಗಿಡಗಳು ನೆಟ್ಟು ಸುಂದರ ಕೈತೋಟ ಮಾಡಿದ್ದಾರೆ.

ADVERTISEMENT

ಶಾಲೆಯಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿ ತೋಟ ನಿರ್ಮಿಸಿಕೊಂಡು ವಿವಿಧ ಬಗೆಯ ತರಕಾರಿ, ಸೊಪ್ಪನ್ನು ಇಲ್ಲಿಯೇ ಬೆಳೆಯುತ್ತಿದ್ದಾರೆ.

ಸರ್ಕಾರದ ಅನುದಾನದಿಂದ ಕೊಠಡಿಗಳ ಸುಂದರೀಕರಣಗೊಳಿಸಲಾಗಿದೆ. ದಾನಿಗಳ ಸಹಕಾರದಿಂದ ಅಗತ್ಯ ಸೌಲಭ್ಯ, ಕಲಿಕಾ ಸಾಮಗ್ರಿ ನೀಡಲಾಗಿದೆ. ಕಂಪ್ಯೂಟರ್, ಮೈಕ್‌ಸೆಟ್, 60 ಚೇರ್, 4 ಬೀರು, ಟೇಬಲ್, ಪೋಡಿಯಂಗಳನ್ನು ದಾನಿಗಳಿಂದ ಸಂಗ್ರಹಿಸಿದ್ದಾರೆ.

2024-25ನೇ ಸಾಲಿನಲ್ಲಿ ಶಾಲೆಗೆ ಉತ್ತಮ ಪರಿಸರ ಪ್ರಶಸ್ತಿ ಬಂದಿದೆ.

ಕೃಷ್ಣಯ್ಯನಪಾಳ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು
ಗಂಗಾಧರಯ್ಯ
ಮುದ್ದರಂಗಯ್ಯ
ಹನುಮಂತರಾಯಪ್ಪ 

ಪೊಲೀಸ್ ಹುದ್ದೆ ಬಿಟ್ಟು ಶಿಕ್ಷಕ ವೃತ್ತಿಗೆ ಈ ಗ್ರಾಮಕ್ಕೆ ಮೊದಲ ಬಾರಿ ಬಂದಾಗ ಇಲ್ಲಿನ ಸ್ಥಿತಿಗತಿ ಕಂಡು ದಂಗಾಗಿದ್ದೆ. ಎದೆಗುಂದದೆ ಇಂತಹ ಕುಗ್ರಾಮದಲ್ಲಿ ಜನರ ವಿಶ್ವಾಸಗಳಿಸಿ 27 ವರ್ಷ ಈ ಶಾಲೆ ಅಭಿವೃದ್ಧಿಗೆ ಶ್ರಮಿಸಿದೆ. ಗಂಗಾಧರಯ್ಯ ಮುಖ್ಯ ಶಿಕ್ಷಕ ಎಸ್.ಸಿ.

ಇಲ್ಲಿನ ಮಕ್ಕಳು ಮೊದಲು ಶಾಲೆಗೆ ಪಕ್ಕದಲ್ಲಿರುವ ಚುಂಚೇನಹಳ್ಳಿ ಗ್ರಾಮಕ್ಕೆ ಹೋಗಬೇಕಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಶಾಲೆಗೆ ಶಿಕ್ಷಕ ಎಸ್.ಸಿ. ಗಂಗಾಧರಯ್ಯ ದೇವರ ಹಾಗೆ ಬಂದರು. ಇಲ್ಲಿನ ಶಿಕ್ಷಕರಿಗೆ ಸಹಕಾರ ನೀಡುತ್ತಿದ್ದೇನೆ. ಮುದ್ದರಂಗಯ್ಯ ಗ್ರಾ.ಪಂ. ಸದಸ್ಯ

ಈ ಶಾಲೆಯಲ್ಲಿ ಗುಣಮಟ್ಟದ ಕಲಿಕೆ ಜೊತೆಗೆ ಉತ್ತಮ ಪರಿಸರ ರೂಪಿಸಿಕೊಂಡಿರುವುದು ಸಂತೋಷದ ಸಂಗತಿ. ಶಿಕ್ಷಕರು ಗ್ರಾಮಸ್ಥರ ಮತ್ತು ದಾನಿಗಳ ಸಹಕಾರದಿಂದ ಶಾಲೆ ಅಭಿವೃದ್ಧಿಯಾಗುತ್ತಿದೆ. ಕೆ.ಎನ್. ಹನುಮಂತರಾಯಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.