ADVERTISEMENT

ತುಮಕೂರು | ಮೈದನಹಳ್ಳಿ ವನ್ಯಧಾಮ; ಕೃಷ್ಣಮೃಗಳು ಮಾಯ

ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣ: ಮೇವಿನ ಕೊರತೆ, ಬೆಂಕಿಗೆ ಪಲಾಯನ

ಗಂಗಾಧರ್ ವಿ ರೆಡ್ಡಿಹಳ್ಳಿ
Published 24 ಮಾರ್ಚ್ 2025, 8:10 IST
Last Updated 24 ಮಾರ್ಚ್ 2025, 8:10 IST
ಕೃಷ್ಣಮೃಗ ವನ್ಯಧಾಮದಲ್ಲಿ ಬೆಂಕಿಗೆ ಹುಲ್ಲು ಹಾಗೂ ಗಿಡಗಳು ಸುಟ್ಟಿತ್ತು (ಸಂಗ್ರಹ ಚಿತ್ರ)
ಕೃಷ್ಣಮೃಗ ವನ್ಯಧಾಮದಲ್ಲಿ ಬೆಂಕಿಗೆ ಹುಲ್ಲು ಹಾಗೂ ಗಿಡಗಳು ಸುಟ್ಟಿತ್ತು (ಸಂಗ್ರಹ ಚಿತ್ರ)   

ಕೊಡಿಗೇನಹಳ್ಳಿ: ಮೈದನಹಳ್ಳಿಯ ಕೃಷ್ಣಮೃಗ ವನ್ಯಧಾಮಕ್ಕೆ ಅಪರೂಪದ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದರು. ಗುಂಪು ಗುಂಪಾಗಿ ಕಾಣುವ ಕೃಷ್ಣಮೃಗಗಳನ್ನು ಕಂಡು ಸಂಭ್ರಮಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೃಷ್ಣಮೃಗಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಿಂದಾಗಿ ಪ್ರವಾಸಿಗರ ಸಂಖ್ಯೆಯೂ ವಿರಳವಾಗಿದೆ.

ಕೊಡಿಗೇನಹಳ್ಳಿ, ಪುರವರ ಹಾಗೂ ಐಡಿಹಳ್ಳಿ ಹೋಬಳಿಯ ಮಧ್ಯೆ ಬರುವ 900 ಎಕರೆ ಪ್ರದೇಶದ ಕೃಷ್ಣಮೃಗ ವನ್ಯಧಾಮ ಮಧುಗಿರಿಯ ಏಕಾಶಿಲಾ ಬೆಟ್ಟದ ನಂತರ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಪ್ರವಾಸಿತಾಣ. ಕೆಲ ವರ್ಷಗಳ ಹಿಂದೆ ಹಲವು ವನ್ಯಜೀವಿಪ್ರಿಯರು, ಪ್ರವಾಸಿಗರು ವನ್ಯಧಾಮಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಬರುವವರ ಸಂಖ್ಯೆ ಕಡಿಮೆಯಾಗಿ ವನ್ಯಧಾಮ ಕಳೆಗುಂದಿದೆ.

ಹಿಂದಿನಿಂದಲೂ ವನ್ಯಧಾಮದಲ್ಲಿನ ಕೃಷ್ಣಮೃಗಗಳು ಸುತ್ತಮುತ್ತಲಿನ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ತಿಂದು ನಾಶ ಮಾಡುತ್ತಿದ್ದರೂ, ದೇಶದಲ್ಲಿ ಬೆರಳಣಿಕೆ ಸ್ಥಳಗಳಲ್ಲಿ ಮಾತ್ರ ಇಂತಹ ಜಾತಿಯ ಪ್ರಾಣಿಗಳನ್ನು ಕಾಣಲು ಸಾಧ್ಯ. ಅಂತಹದರಲ್ಲಿ ನಮ್ಮ ಭಾಗದಲ್ಲಿರುವ ವನ್ಯಧಾಮಕ್ಕೆ ರಾಜ್ಯ, ದೇಶ- ವಿದೇಶದಿಂದಲೂ ವೀಕ್ಷಿಸಲು ಹಲವರು ಬರುವುದು ಸೌಭಾಗ್ಯವೆಂದು ತಿಳಿದಿದ್ದೆವು. ಆದರೆ ಈಗ ವನ್ಯಧಾಮದ ಸುತ್ತಲಿನ ಹಲವು ಜಮೀನುಗಳು ಕೃಷ್ಣಮೃಗಗಳ ಹಾವಳಿಯಿಂದ ಪಾಳು ಬಿದ್ದಿವೆ. ಜೊತೆಗೆ ಸರ್ಕಾರ ಹಾಗೂ ಅರಣ್ಯ ಇಲಾಖೆ ವನ್ಯಧಾಮವನ್ನು ಸಹ ಸರಿಯಾದ ಅಭಿವೃದ್ಧಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಮೇವಿನ ಕೊರತೆ: ವನ್ಯಧಾಮದಲ್ಲಿ ಕೃಷ್ಣಮೃಗಗಳಿಗಾಗಿ ಅರಣ್ಯ ಇಲಾಖೆಯಿಂದ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳಿಗೆ ಬೇಕಾದ ಮೇವು ಹಾಗೂ ಗಿಡ-ಮರಗಳು ಇಲ್ಲದಿರುವುದು ಜಿಂಕೆಗಳು ಸುತ್ತಲಿನ ಜಮೀನಗಳಲ್ಲಿ ರೈತರು ಬೆಳೆಯುವ ಬೆಳೆಗಳತ್ತ ಲಗ್ಗೆ ಇಡುವಂತಾಗಿದೆ. ಹಿಂದೆ ಇದೇ ಅರಣ್ಯ ಇಲಾಖೆಯಿಂದಲೇ ವನ್ಯಧಾಮದ 10 ಎಕರೆ ಜಾಗದಲ್ಲಿ ಹುಲ್ಲಿನಬೀಜ, ಮೆಕ್ಕೆಜೋಳ, ತೊಗರಿ, ಹಿಪ್ಪುನೇರಳೆ, ಹುರಳಿ ಬೆಳೆಯುತ್ತಿದ್ದರು. ಆದರೆ ಈಗ ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಅವುಗಳನ್ನು ಬೆಳೆಯಲಾಗುತ್ತಿಲ್ಲ. ಹುಲ್ಲು ಚಿಗುರಿದರೆ ಮಾತ್ರ ಜಿಂಕೆಗಳಿಗೆ ಮೇವು. ಇಲ್ಲವಾದರೆ ರೈತರ ಜಮೀನುಗಳಲ್ಲಿನ ಬೆಳೆಯೆ ಅವುಗಳಿಗೆ ಗತಿ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದೆ ಕೃಷ್ಣಮೃಗಗಳು ವಿಶ್ರಾಂತಿ ಗೃಹದ ಸುತ್ತಲಿನ ಪ್ರದೇಶದಲ್ಲಿ 40ರಿಂದ 50 ಜಿಂಕೆಗಳು ಗುಂಪು ಗುಂಪಾಗಿ ಇರುತ್ತಿದ್ದವು. ಆದರೆ ಕೆಲ ವರ್ಷಗಳ ಹಿಂದೆ ವನ್ಯಧಾಮದಲ್ಲಿ ಬೆಂಕಿ ತಗುಲಿ ಗಿಡಗಂಟಿಗಳ ಜೊತೆಗೆ ಹುಲ್ಲು ಹೊತ್ತಿ ಉರಿದ ಪರಿಣಾಮ ಕೃಷ್ಣಮೃಗಗಳು ಹೆದರಿ ತಂಗುದಾಣ ಮತ್ತು ವಿಶ್ರಾಂತಿ ಗೃಹದ ಬಳಿ ಬಾರದಂತಾಗಿವೆ. ಅವು ಈಗ ಹೆಚ್ಚಾಗಿ ಗಿರೇಗೌಡನಹಳ್ಳಿ, ಯರಗುಂಟೆ, ಮುದ್ದೇನಹಳ್ಳಿ, ತಾಡಿ, ತಂಡೋಟಿಯ ತಗ್ಗುಪ್ರದೇಶದ ರೈತರ ಜಮೀನುಗಳಲ್ಲಿ ಕಾಣಸಿಗುತ್ತವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

ವನ್ಯಧಾಮದಲ್ಲಿನ ವೀಕ್ಷಣಾ ಗೋಪುರ

ಆಹಾರ ಒದಗಿಸಿ

50 ವರ್ಷದಿಂದ ವನ್ಯಧಾಮದ ಸುತ್ತಮುತ್ತಲ 30-40 ಹಳ್ಳಿಗಳ ಪ್ರದೇಶದ ವ್ಯಾಪ್ತಿಯಲ್ಲಿ ಕೃಷ್ಣಮೃಗಗಳು ಬೀಡು ಬಿಡುತ್ತಿದ್ದವು. 10 ಸಾವಿರ ಎಕರೆ ಪ್ರದೇಶದಲ್ಲಿ ಸಂಚರಿಸುತ್ತ ಬೆಳೆಗಳನ್ನು ತಿಂದು ನಾಶ ಮಾಡುತ್ತಿರುವ ಪರಿಣಾಮ ಪ್ರತಿವರ್ಷ ಸುಮಾರು ₹10 ಕೋಟಿಯಷ್ಟು ಬೆಳೆ ನಷ್ಟವಾಗುತ್ತಿತ್ತು. ಸರ್ಕಾರ ಆಹಾರ ನೀರು ಒದಗಿಸಬೇಕು. ಅರಣ್ಯದ ಸುತ್ತ ಬೇಲಿ ನಿರ್ಮಿಸಬೇಕು.

–ಶಂಕರಪ್ಪ ಜಿಲ್ಲಾ ಪ್ರದಾನ ಕಾರ್ಯದರ್ಶಿ ರೈತ ಸಂಘ

ಜವಳಿ ಪಾರ್ಕ್ ನಿರ್ಮಿಸಿ

ವನ್ಯಧಾಮ ಸುತ್ತಲಿನ ಜಮೀನುಗಳಿಗೆ ವರ್ಷಕ್ಕೆ ಅಥವಾ ಇಷ್ಟು ವರ್ಷಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಅಲ್ಲಿನ ರೈತರನ್ನು ಒಪ್ಪಿಸಿ ಸರ್ಕಾರ ಅಲ್ಲಿ ಜವಳಿ ಪಾರ್ಕ್ ನಿರ್ಮಿಸುವುದರ ಜೊತೆಗೆ ಪ್ರಾಣಿಗಳಿಗೆ ಬೇಕಾಗುವ ಗಿಡಗಳನ್ನು ಬೆಳೆಸಿದರೆ ಖಂಡಿತವಾಗಿ ಈ ಭಾಗದ ರೈತರು ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲಿದೆ

– ಗೊವಿಂದರಾಜು ತೆರಿಯೂರು

ರಸ್ತೆ ಪಾರ್ಕ್‌ ನಿರ್ಮಿಸಿ

ವನ್ಯಧಾಮದಲ್ಲಿ ರಸ್ತೆ ಜೊತೆಗೆ ಉತ್ತಮ ಪಾರ್ಕ್ ನಿರ್ಮಿಸಬೇಕು. ವಿವಿಧ ಬಗೆಯ ಸಸಿ ಹೂವಿನ ಗಿಡಗಳನ್ನು ಬೆಳೆಸಬೇಕು. ಆರ್ಥಿಕ ಲಾಭ ತಂದು ಕೊಡುವ ಯೋಜನೆಯನ್ನು ರೂಪಿಸಬೇಕು. ಆಗ ಮಾತ್ರ ಪ್ರವಾಸಿಗರ ಸಂಖ್ಯೆ ಹೆಚ್ಚುವುದರ ಜೊತೆಗೆ ಸರ್ಕಾರಕ್ಕೂ ಆದಾಯ ಬರಲಿದೆ.

–ಎನ್. ಕೊಂಡರೆಡ್ಡಿ, ಕೊಡಿಗೇನಹಳ್ಳಿ

ವಾಹನ ದಟ್ಟಣೆಯಾದರೆ ತೊಂದರೆ

ಕೃಷ್ಣಮೃಗಗಳಿರುವ ಕಡೆ ಗಿಡ-ಮರಗಳಿರದೆ ಕೇವಲ ಪೊದೆಗಳಿರಬೇಕು. ರೈತರಿಂದ ಜಮೀನು ಪಡೆದು ಅಲ್ಲಿ ಕೃಷ್ಣಮೃಗಗಳಿಗೆ ಅನುಕೂಲವಾಗುವಂತಹ ಹುಲ್ಲನ್ನು ಬೆಳೆಸಿ ಅವು ಇತರೆಡೆ ಚದುರದಂತೆ ತಡೆಯಬಹುದು. ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ವನ್ಯಧಾಮ ಅಭಿವೃದ್ಧಿಪಡಿಸಲು ಹೊರಟರೆ ವಾಹನ ದಟ್ಟಣೆಯಿಂದ ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂಬ ಆತಂಕ ಇಲಾಖೆಯದ್ದು.

–ಎಚ್.ಎಂ.ಸುರೇಶ್ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.