ತುಮಕೂರಿನಲ್ಲಿ ಮಂಗಳವಾರ ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಭಾರತ ವೈದ್ಯಕೀಯ ಸಂಘದ (ಐಎಂಎ) ವತಿಯಿಂದ ಮೊಂಬತ್ತಿ ಮೆರವಣಿಗೆ ನಡೆಯಿತು.
ತುಮಕೂರು: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಖಂಡನೀಯ. ಇದು ಇಡೀ ಸಮಾಜ ತಲೆತಗ್ಗಿಸುವ ವಿಷಯ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.
‘ಎಲ್ಲ ವರ್ಗದ ಮಹಿಳೆಯರಿಗೆ ಸುರಕ್ಷತೆಯ ಕೊರತೆ ಇದೆ. ಸರ್ಕಾರ ಕೂಡಲೇ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಶಿಕ್ಷಣ ಪಡೆಯುವುದು ಸಣ್ಣ ವಿಷಯವಲ್ಲ. ಸಾಕಷ್ಟು ಶ್ರಮವಹಿಸಿ ಈ ವೃತ್ತಿಯನ್ನು ಆರಿಸಿಕೊಂಡು ಬಂದಿರುತ್ತಾರೆ. ಜೀವ ಉಳಿಸುವ ವೈದ್ಯರ ಸ್ಥಿತಿ ಹೀಗಾದರೆ, ಜನಸಾಮಾನ್ಯರ ಪಾಡೇನು?’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ತಮ್ಮದಲ್ಲದ ತಪ್ಪಿಗೆ ವೈದ್ಯರು ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರುವ ಮಹಿಳೆಯರ ಸಂಖ್ಯೆ ಕುಸಿದಿದೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಸರ್ಕಾರ ಸೂಕ್ತ ಕ್ರಮ ನಡೆಸಬೇಕು ಎಂದು ಒತ್ತಾಯಿಸಿದರು.
ಲೇಖಕಿ ಬಾ.ಹ.ರಮಾಕುಮಾರಿ, ‘ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮನ ಪರಿವರ್ತನೆಯಾಗಬೇಕು. ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗದ ಹೊರತು ಇಂತಹ ಘಟನೆಗಳು ನಿಲ್ಲುವುದಿಲ್ಲ. ಕೋಲ್ಕತ್ತ ಘಟನೆಯ ವಿರುದ್ಧ ಎಲ್ಲರು ಹೋರಾಟಕ್ಕೆ ಇಳಿಯಬೇಕು. ಆಳುವ ಸರ್ಕಾರಕ್ಕೆ ಪ್ರತಿರೋಧದ ಧ್ವನಿ ತಟ್ಟುವಂತೆ ಮಾಡಬೇಕು’ ಎಂದರು.
ವೈದ್ಯಕೀಯ ಸಂಘದ ಡಾ.ಮಹೇಶ್, ಡಾ.ಡಿ.ಹನುಮಕ್ಕ, ಡಾ.ಅನಿತಾ ಬಿ.ಗೌಡ, ಡಾ.ಕೆ.ಶೃತಿ ಇತರರು ಹಾಜರಿದ್ದರು.
ವಿದ್ಯಾರ್ಥಿನಿ ಕೊಲೆ ಖಂಡಿಸಿ ಮೇಣದ ಬತ್ತಿ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.