ADVERTISEMENT

ತಿಪಟೂರು | ಕೆವಿಕೆ ಸ್ಥಳಾಂತರದ ಸದ್ದು: ಸ್ಥಳೀಯ ರೈತರಿಂದ ತೀವ್ರ ವಿರೋಧ

ಕೊನೇಹಳ್ಳಿ ಕೇಂದ್ರದ ಆಸ್ತಿ ವರ್ಗಾವಣೆ

ಪ್ರಜಾವಾಣಿ ವಿಶೇಷ
Published 19 ಜುಲೈ 2025, 3:09 IST
Last Updated 19 ಜುಲೈ 2025, 3:09 IST
ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ
ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ   

ತಿಪಟೂರು: ತಾಲ್ಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬ ಸುದ್ದಿ ತಾಲ್ಲೂಕಿನಲ್ಲಿ ಹರಿದಾಡುತ್ತಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಕೇಂದ್ರವು ಹಲವು ವರ್ಷಗಳಿಂದ ಸ್ಥಳೀಯ ರೈತರಿಗೆ ನೆರವು ನೀಡುತ್ತಿದೆ. ಬೆಳೆ ಸಂಶೋಧನೆ, ನವೀನ ತಂತ್ರಜ್ಞಾನಗಳ ಪರಿಚಯ, ನೈಪುಣ್ಯ ತರಬೇತಿ, ಬಿತ್ತನೆ ಬೀಜ ವಿತರಣೆ, ಮಣ್ಣು ತಪಾಸಣೆ ಪರೀಕ್ಷೆ, ಹವಾಮಾನ ಮಾಹಿತಿ, ರೋಗ ನಿರ್ವಹಣೆ ತಂತ್ರ, ಕೃಷಿ ಪರಿಕರ ಬಳಕೆಯ ತರಬೇತಿ ನೀಡುತ್ತಿದೆ. ಇದು ಕೇವಲ ತರಬೇತಿ ಕೇಂದ್ರವಾಗದೆ, ಕೃಷಿಯ ನಾಡು- ನುಡಿಗಳ ಜ್ಞಾನ ಶಾಖೆಯಂತಿದೆ.

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಡಿ (ಜಿಕೆವಿಕೆ) ಕೊನೇಹಳ್ಳಿಯಲ್ಲಿ 1999ರಲ್ಲಿ ಕ್ಷೇತ್ರ ಪ್ರಯೋಗಶಾಲೆ ಎಂದು ಪ್ರಾರಂಭವಾದ ಕೇಂದ್ರವು 2004ರಲ್ಲಿ ಕೃಷಿ ವಿಜ್ಞಾನ ಕೇಂದ್ರ ಬಿದರೆಗುಡಿ ಕಾವಲು, ಕೃಷಿ ಸಂಶೋಧನಾ ಕೇಂದ್ರ ಮೂಡಲಕಾವಲು ಕೊನೇಹಳ್ಳಿ, ಜಾನುವಾರು ಸಂಶೋಧನಾ ಕೇಂದ್ರ ಎಂದು ವಿಭಾಗಗೊಂಡು ಕಾರ್ಯಾರಂಭ ನಡೆಯುತ್ತಿತ್ತು.

ADVERTISEMENT

2004ರಲ್ಲಿ ಪ್ರಾರಂಭಗೊಂಡ ಬೀದರ್ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯಕ್ಕೆ ಕೊನೇಹಳ್ಳಿ ಕೇಂದ್ರದ ಆಸ್ತಿ ವರ್ಗಾವಣೆ, ಆಡಳಿತಾತ್ಮಕ ಬದಲಾವಣೆ ಹಿನ್ನಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರಗಳು ತನ್ನ ಆಸ್ತಿ, ಆಸ್ವಿತ್ವ ಕಳೆದುಕೊಂಡಿತು. 2023ರಲ್ಲಿ ಸಂಪೂರ್ಣವಾಗಿ ಸ್ಥಳಾಂತರಗೊಂಡಿತು. 135 ಎಕರೆ ಪ್ರದೇಶದಲ್ಲಿನ ರಾಗಿ ತೊಗರಿ, ಸೋಯಾಬೀನ್, ಹುಚ್ಚೆಳ್ಳು, ಉದ್ದು, ಹೆಬ್ಬಾಳ ಅವರೆ ಬಿತ್ತನೆ ಬೀಜಗಳ ಸಂಶೋಧನೆ ಸ್ಥಗಿತಗೊಂಡಿತು. ಇಲ್ಲಿದ್ದ ವಿಶೇಷ ತಳಿಯ ಜಾನುವಾರುಗಳನ್ನು ಹಾಸನದ ಮಡೆನೂರು, ಮೈಸೂರಿನ ನಾಗೇನಹಳ್ಳಿ, ಮಂಡ್ಯದ ವಿಸಿ ಫಾರಂಗೆ ಸ್ಥಳಾಂತರ ಮಾಡಲಾಗಿದೆ.

ಸದ್ಯ ಕೆವಿಕೆಯ 50 ಎಕರೆ ಪ್ರದೇಶದಲ್ಲಿ ಹಲವು ರೀತಿಯ ಸಂಶೋಧನಾ ಸಸ್ಯ ಪ್ರಭೇದಗಳಿದ್ದು, ಆಸ್ತಿ ವರ್ಗಾವಣೆಯಾಗಿರುವುದರಿಂದ ಕೊನೇಹಳ್ಳಿ ಕೇಂದ್ರವು ಸ್ಥಗಿತಗೊಂಡು ಬೇರೆಡೆ ಸ್ಥಳಾಂತರವಾಗುವ ಭೀತಿ ಎದುರಾಗಿದೆ. ಕೇಂದ್ರದ ಉಳಿವಿಗೆ ತಾಲ್ಲೂಕು ಆಡಳಿತ, ರಾಜಕೀಯ ನಾಯಕರು, ಜನಪ್ರತಿನಿಧಿಗಳು ಶ್ರಮಿಸಬೇಕು ಎನ್ನುತ್ತಾರೆ ರೈತರು.

ಸ್ಥಳಾಂತರಗೊಂಡಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ಕಟ್ಟಡ, ಸಂಶೋಧನಾ ಕೇಂದ್ರಗಳು ನಾಶವಾಗುವ ಆತಂಕವೂ ಸ್ಥಳೀಯರಿಗಿದೆ.

ಯಾವುದೇ ಕಾರಣಕ್ಕೂ ಕೆವಿಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಬೀದರ್ ಕುಲಪತಿ ಜೊತೆ ಮಾತುಕತೆ ನಡೆಸಲಾಗಿದೆ. ಕೊನೇಹಳ್ಳಿ ಕೆವಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು.
-ಕೆ.ಷಡಕ್ಷರಿ, ಶಾಸಕ
ಕೆವಿಕೆ ಸ್ಥಳಾಂತರಕ್ಕೆ ಮುಂದಾಗಿರುವುದು ತಪ್ಪು. ಈಗಾಗಲೇ 115 ಎಕರೆ ಪ್ರದೇಶದ ಕೃಷಿ ಸಂಶೋಧನೆ ಕೇಂದ್ರ ಮುಚ್ಚಿಹೋಗಿದೆ. ಉಳುಮೆ ನಿರ್ವಹಣೆ ಇಲ್ಲದೆ ಗೋದಾಮು ಕೊಟ್ಟಿಗೆ ಕಚೇರಿಗಳು ಶಿಥಿಲಾವಸ್ಥೆ ತಲುಪಿದೆ. ವನ್ಯ ಜೀವಿಗಳ ಆವಾಸಸ್ಥಾನವಾಗಿದೆ. ಜಾನುವಾರು ಮೇಯಲು ಕಷ್ಟದ ಸ್ಥಿತಿ ಇದೆ. ಶಾಸಕರು ಕೆವಿಕೆ ಉಳಿಸಲು ಯತ್ನಿಸಬೇಕು.
-ಯೋಗೀಶ್, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ 
ಕೃಷಿಕರ ಕಣ್ಣಿನ ಬೆಳಕು ಕೆವಿಕೆ ಕೇವಲ ಕಚೇರಿಯಲ್ಲ. ಕೃಷಿಕರ ಕಣ್ಣಿನ ಬೆಳಕು. ನಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಬೆಳೆಸಿದ್ದೇವೆ. ಈಗ ಇದನ್ನು ಕಳೆದುಕೊಂಡರೆ ಗ್ರಾಮಕ್ಕೆ ನಷ್ಟವಾಗುತ್ತದೆ. ಇಲ್ಲಿ ನಾವು ಮಣ್ಣು ಪರೀಕ್ಷಿಸಿದ್ದೇವೆ ಬೀಜ ಪಡೆದಿದ್ದೇವೆ ತರಬೇತಿ ಪಡೆದು ನಿಷ್ಠಾವಂತ ಕೃಷಿಕರಾಗಿದ್ದೇವೆ. ಈಗ ನಮ್ಮ ಕೈಯಿಂದ ಈ ಕೇಂದ್ರವನ್ನು ಕಿತ್ತುಕೊಂಡರೆ ಕೃಷಿಕ ಜೀವನ ನಾಶವಾಗುತ್ತದೆ.
-ಪುಟ್ಟಶಂಕರಪ್ಪ, ರೈತ ಪಟ್ರೇಹಳ್ಳಿ 
ಮೌಲ್ಯವರ್ಧನೆ ಸಲಹೆ ಪ್ರಾತ್ಯಕ್ಷಿಕೆಯಿಂದ ವಂಚಿತ ಎರಡು ದಶಕಗಳಿಂದ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಬೀಜೋತ್ಪಾದನೆ ಮಾಡಿ ರೈತರಿಗೆ ವಿತರಿಸಲಾಗುತ್ತಿದೆ. ಮೈಸೂರು ಮಹಾರಾಜರ ಕಾಲದಿಂದಲೂ ಗುರುತಿಸಿರುವ ಕೊನೇಹಳ್ಳಿ ಹುಲ್ಲುಗಾವಲು ಕೃಷಿ ಮತ್ತು ಪಶು ಪಶುಪಾಲನೆಗೆ ಯೋಗ್ಯವಾಗಿದೆ. ಸ್ಥಳಾಂತರವಾದರೆ ಸ್ಥಳೀಯರು ಕೃಷಿ ಮಾಹಿತಿಯಿಂದ ವಂಚಿತರಾಗುತ್ತಾರೆ. ಮೌಲ್ಯವರ್ಧನೆ ತಾಂತ್ರಿಕ ಸಲಹೆ ವಿವಿಧ ಪ್ರಾತ್ಯಕ್ಷಿಕೆಗಳು ರೈತರು ವೀಕ್ಷಣಗೆ ದೊರೆಯದಂತಾಗುತ್ತದೆ. ವಿವಿಧ ಬೀಜೋತ್ಪಾದನೆ ಮತ್ತು ಹೊಸ ತಳಿಗಳ ಸಂಶೋಧನೆ ನಿಂತು ಹೋಗುತ್ತದೆ.
-ಉಜ್ಜಜ್ಜಿ ರಾಜಣ್ಣ, ಅಲೆಮಾರಿ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.