ಕೊರಟಗೆರೆ: ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದೈಹಿಕ ಶಿಕ್ಷಕರ ಬೇಜವಾಬ್ದಾರಿಯಿಂದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ದೂರ ಉಳಿದಿದ್ದರಿಂದ ಕ್ರೀಡಾಕೂಟ ಮುಂದೂಡಲಾಯಿತು.
ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಯೋಗದಲ್ಲಿ ತಾಲ್ಲೂಕು ದಸರಾ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಯಾವುದೇ ಪ್ರಚಾರ ಹಾಗೂ ಕ್ರೀಡಾಪಟುಗಳಿಗೂ ಮಾಹಿತಿ ನೀಡದೆ ಕ್ರೀಡಾಕೂಟ ನಡೆಸಲಾಗುತ್ತಿತ್ತು. ಬೆರಳಣಿಕೆಯಷ್ಟು ಕ್ರೀಡಾಪಟುಗಳು ಮಾತ್ರ ಹಾಜರಾಗಿದ್ದರು. ಮಧ್ಯಾಹ್ನ 12ಗಂಟೆಯಾದರೂ ಆಯೋಜಕರಾಗಲಿ, ಅಧಿಕಾರಿಗಳಾಗಲಿ ಕ್ರೀಡಾ ಮೈದಾನಕ್ಕೆ ಬಂದಿರಲಿಲ್ಲ. ಕ್ರೀಡಾಂಗಣ ಸ್ವಚ್ಛತೆ ಮಾಡಿರಲಿಲ್ಲ.
ಪರಿಸ್ಥಿತಿ ಅರಿತ ಕ್ರೀಡಾಪಟುಗಳು ದೈಹಿಕ ಶಿಕ್ಷಕರನ್ನು ಪ್ರಶ್ನಿಸಿದಾಗ ತಮಗೇನೂ ಗೊತ್ತಿಲ್ಲ ಎಂಬ ಉತ್ತರ ಸಿಕ್ಕಿತು. ಜತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಂದ ಮೈದಾನದಲ್ಲಿ ಡಸ್ಕ್ ಹಾಕುವ ಕೆಲಸ ಮತ್ತು ಓಡಲು ಸಿದ್ಧತೆ ತರಾತುರಿಯಲ್ಲಿ ಪ್ಲಾಸ್ಟಿಕ್ ಗಾರ್ಡ್ ಇರಿಸಲಾಗುತ್ತಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ‘ಆ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಸೂಚನೆ ಮೇರೆಗೆ ಮಾಡಿಸಲಾಗುತ್ತಿದೆ’ ಎಂಬ ಉತ್ತರ ನೀಡಿದರು’
ಈ ಎಲ್ಲ ಘಟನೆಯಿಂದ ಕ್ರೀಡಾಪಟುಗಳು ಪ್ರತಿಭಟನೆಗೆ ಮುಂದಾದರು. ವಿಷಯ ತಿಳಿದ ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ನಾಗಣ್ಣ ಸ್ಥಳಕ್ಕೆ ಭೇಟಿ ನೀಡಿ ಆಯೋಜಕ ಮಂಜುನಾಥ್ ಅವರನ್ನು ಹಾಗೂ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ವಜೀರ್ ಅವರನ್ನು ಸ್ಥಳಕ್ಕೆ ಕರೆಸಿ ವಿಚಾರಿಸಿದಾಗ ಇಬ್ಬರೂ ಕೂಡ ಒಬ್ಬರ ಮೇಲೆ ಒಬ್ಬರು ತಪ್ಪು ಹೊರೆಸಿ ಜಗಳಕ್ಕೆ ಬಿದ್ದರು.
ಕ್ರೀಡಾಕೂಟ ಪ್ರಾರಂಭಕ್ಕೂ ಮುನ್ನಾ ಕ್ರೀಡಾಪಟುಗಳಿಗೆ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಕಿಟ್, ತಿಂಡಿ, ಊಟದ ವ್ಯವಸ್ಥೆ ಯಾವುದನ್ನೂ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ರೀಡಾಕೂಟ ಆ.31ಕ್ಕೆ ಮುಂದೂಡಲಾಯಿತು.
ಕೊರಟಗೆರೆ ಸ್ಪೋಟ್ಸ್ ಕ್ಲಬ್ ಕಾರ್ಯದರ್ಶಿ ವಿನಯ್ ಕುಮಾರ್, ಮುಖಂಡ ಗಟ್ಲಹಳ್ಳಿ ಕುಮಾರ್, ಕ್ರೀಡಾ ಪಟುಗಳಾದ ಹರ್ಷಿತ್, ಸಿದ್ದರಾಜು, ರಂಗನಾಥ್, ದಿಲೀಪ್, ಭರತ್, ಅನಿಲ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.