ADVERTISEMENT

ಶಿರಾ: ಕೃಷಿಮೇಳ, ರೈತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 13:24 IST
Last Updated 22 ಜನವರಿ 2025, 13:24 IST
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರೆ ಅಂಗವಾಗಿ ನಡೆದ ರೈತರ ಸಮಾವೇಶವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ ಉದ್ಘಾಟಿಸಿದರು. ನಂಜಾವಧೂತ ಸ್ವಾಮೀಜಿ ಹಾಜರಿದ್ದರು
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರೆ ಅಂಗವಾಗಿ ನಡೆದ ರೈತರ ಸಮಾವೇಶವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಆಶೋಕ ಉದ್ಘಾಟಿಸಿದರು. ನಂಜಾವಧೂತ ಸ್ವಾಮೀಜಿ ಹಾಜರಿದ್ದರು   

ಶಿರಾ: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ದೊರೆತು ರೈತರಿಗೆ ಲಾಭದಾಯಕವಾದರೆ ಮಾತ್ರ ಕೃಷಿ ಕ್ಷೇತ್ರದತ್ತ ಯುವಜನತೆ ಮುಖ ಮಾಡಲು ಸಾಧ್ಯ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಗುರುಗುಂಡ ಬ್ರಹ್ಮೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಬುಧವಾರ ನಡೆದ ಕೃಷಿಮೇಳ ಹಾಗೂ ಜಿಲ್ಲೆಯ 10 ತಾಲ್ಲೂಕುಗಳ ರೈತರ ಸಮಾವೇಶದಲ್ಲಿ ಮಾತನಾಡಿದರು.

ರೈತರ ಬದುಕು ಹಸನು ಮಾಡಲು ಸರ್ಕಾರಗಳು ರೂಪಿಸಿದ ಯೋಜನೆಗಳನ್ನು ನೇರವಾಗಿ ರೈತರಿಗೆ ತಲುಪಿಸಬೇಕು. ವೈಜ್ಞಾನಿಕ ಕೃಷಿ ಅವಿಷ್ಕಾರಗಳ ಬಗ್ಗೆ ವಸ್ತು ಪ್ರದರ್ಶನದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ADVERTISEMENT

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಆಶೋಕ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಅನುಭವದಿಂದ ಆಗಬೇಕೆ ಹೊರತು ಸಂಶೋಧನೆಗಳಿಂದಲ್ಲ. ಸಂಶೋಧನೆ ಒಳ್ಳೆಯದು ಅದರೆ ನೈಸರ್ಗಿಕ ಪದ್ಧತಿಯಿಂದ ಹೆಚ್ಚು ದೂರ ಕರೆದುಕೊಂಡು ಹೋಗಬಾರದು. ಹಿಂದೆ ರೈತರ ಮನೆಯಲ್ಲಿ ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬನ್ನು ಕೃಷಿಗೆ ಪೂರಕವಾಗಿ ಅವಲಂಬಿಸಿದ್ದರು. ಅದರೆ ಇದೀಗ ರೈತರು ಎಲ್ಲವನ್ನೂ ಖರೀದಿಸುವಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಅಲೋಚಿಸಬೇಕು. ಸರ್ಕಾರ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚು ಗಮನಕೊಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ನೀರಾವರಿ ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ವಾಮೀಜಿ ಧ್ವನಿಯಾಗಿ ಹೋರಾಟ ನಡೆಸಿದ್ದಾರೆ. ಮದಲೂರು ಕೆರೆಗೆ ನೀರು ಬರಲು ಸ್ವಾಮೀಜಿ ಪ್ರೇರಣಾ ಶಕ್ತಿಯಾಗಿದ್ದು, ಹುಲಿಕುಂಟೆ ಹೋಬಳಿಗೆ ಸಹ ನೀರು ತರುವ ಕೆಲಸ ಮಾಡಬೇಕು ಎಂದರು.

ಶಾಸಕ ಎಚ್.ಡಿ.ರಂಗನಾಥ್, ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಸುರೇಶ್ ಮಾತನಾಡಿದರು.

ಕೃಷಿಕ ಸಮಾಜ ಅಧ್ಯಕ್ಷ ಎನ್.ಸಿ.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ್, ನೇಗಿಲಯೋಗಿ ಸೇವಾ ಟ್ರಸ್ಟ್‌ನ ಮುನಿರತ್ನಪ್ಪ, ಜಯರಾಮಯ್ಯ, ಹೆಂದೊರೆ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿದೇವಿ, ಕೃಷಿ ವಿಜ್ಞಾನಿ ಶಂಕರ್, ಕೃಷಿ ಕಾಲೇಜಿನ ಪ್ರಾಧ್ಯಾಪಕ ಸಂಜಯ್, ಹೇಮಣ್ಣ, ನಾಗರಾಜ್ ಗೌಡ, ಚಿಕ್ಕಣ್ಣ, ಸಣ್ಣ ಹನುಮಕ್ಕ, ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.