ತುಮಕೂರು: ‘ಎರಡು ಗಂಟೆಗಳಿಂದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೇವೆ. ಈವರೆಗೂ ಒಂದು ಬಸ್ ಕೂಡ ಬಂದಿಲ್ಲ. ಈಗ ನೋಡಿದರೆ ಬಸ್ ಬರಲ್ಲ, ಮನೆಗೆ ಹೋಗಿ ಎನ್ನುತ್ತಿದ್ದಾರೆ’ ಎಂದು ನಗರದಿಂದ ಹೊಸದುರ್ಗಕ್ಕೆ ತೆರಳಬೇಕಿದ್ದ ಅಸ್ಮಾ ಭಾನು ಬೇಸರ ವ್ಯಕ್ತಪಡಿಸಿದರು.
‘ಮುಷ್ಕರದ ಬಗ್ಗೆ ಮಾಹಿತಿ ಇರಲಿಲ್ಲ. ಮೈಸೂರಿಗೆ ಹೋಗಬೇಕಿತ್ತು, ಬೆಳಿಗ್ಗೆಯೇ ಬಸ್ ನಿಲ್ದಾಣಕ್ಕೆ ಬಂದಿದ್ದೇನೆ. ಒಂದು ಬಸ್ ಕೂಡ ಇಲ್ಲ’ ಎಂದು ವಿದ್ಯಾರ್ಥಿನಿ ಪೂಜಾಶ್ರೀ ಅಳಲು ತೋಡಿಕೊಂಡರು.
ಕೆಎಸ್ಆರ್‌ಟಿಸಿ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಿದರು. ಬಸ್‌ಗಳಿಲ್ಲದೆ ಜಿಲ್ಲೆಯ ಸಾರ್ವಜನಿಕರು ಪರದಾಡಿದರು. ಬೆಳಿಗ್ಗೆ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದವು. ಮಧ್ಯಾಹ್ನದ ವೇಳೆಗೆ ಬಸ್ ಸಂಚಾರ ಬಹುತೇಕ ಸ್ತಬ್ಧವಾಗಿತ್ತು.
ತುಮಕೂರು– ಬೆಂಗಳೂರು ಮಧ್ಯೆ ಕೆಲ ಬಸ್‌ಗಳು ಸಂಚರಿಸಿದವು. ಗ್ರಾಮೀಣ ಭಾಗದ ಕಡೆಗೆ ಹೋಗುವ ಬಸ್‌ಗಳ ಸಂಖ್ಯೆಯೂ ತೀರಾ ಕಡಿಮೆಯಾಗಿತ್ತು. ಹಳ್ಳಿಗಳಿಗೆ ತೆರಳುವ ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದ ದೃಶ್ಯಗಳು ಕಂಡು ಬಂದವು.
ಬೇರೆ ಜಿಲ್ಲೆಗಳಿಗೆ ಹೋಗಬೇಕಾದ ಪ್ರಯಾಣಿಕರು ಕೂಡ ಸಮಸ್ಯೆ ಅನುಭವಿಸಿದರು. ಹೊರ ಜಿಲ್ಲೆಗಳ ಬಸ್‌ಗಳು ನಿಲ್ದಾಣಕ್ಕೆ ಬರಲೇ ಇಲ್ಲ. ರಾತ್ರಿ ವಿವಿಧ ಡಿಪೊಗಳಲ್ಲಿ ನಿಂತಿದ್ದ ಬಸ್‌ಗಳು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಆಗಮಿಸಿದವು. ನಂತರ ನಿಲ್ದಾಣದಿಂದ ಬೇರೆ ಕಡೆಗೆ ತೆರಳಲಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೆಲಸದ ನಿಮಿತ್ತ ಹೊರಗಡೆ ಬಂದವರು ವಾಪಸ್ ಮನೆಗೆ ತೆರಳಲು ಸಂಕಷ್ಟ ಅನುಭವಿಸಿದರು.
‘ಶಕ್ತಿ’ ಯೋಜನೆ ಜಾರಿಯಾದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದ ಮಹಿಳೆಯರು ಅನಿವಾರ್ಯವಾಗಿ ಖಾಸಗಿ ಬಸ್‌ಗಳ ಮೊರೆ ಹೋಗಿದ್ದರು. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿತ್ತು. ಎಂದಿಗಿಂತ ಹೆಚ್ಚಿನ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಸಂಚರಿಸಿದರು.
ಸರ್ಕಾರಿ ಕಚೇರಿಗಳು ಸಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಸದಾ ಜನರಿಂದ ತುಂಬಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಕಾಣಿಸಿಕೊಂಡರು. ಮುಷ್ಕರದ ಬಗ್ಗೆ ತಿಳಿದ ಜನ ಮನೆಗಳಲ್ಲಿಯೇ ಉಳಿದಿದ್ದರು. ಶಾಲಾ–ಕಾಲೇಜುಗಳಲ್ಲಿಯೂ ಹಲವು ವಿದ್ಯಾರ್ಥಿಗಳು ಗೈರಾಗಿದ್ದರು. ನೌಕರರ ಹಾಜರಾತಿಯೂ ಕಡಿಮೆ ಇತ್ತು. ಪ್ರಮುಖ ಕಚೇರಿ, ಕಾಲೇಜುಗಳು ಖಾಲಿ ಖಾಲಿಯಾಗಿದ್ದವು.
‘ಶೇ 70ರಷ್ಟು ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಉಳಿದವರಿಗೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹೇಳಿದರು.
ವಿ.ವಿ ಪರೀಕ್ಷೆ: ದಿಢೀರ್ ಮುಂದೂಡಿಕೆ
ಕೆಎಸ್ಆರ್‌ಟಿಸಿ ನೌಕರರ ಮುಷ್ಕರ ಕಾರಣ ತುಮಕೂರು ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಲಾಗಿದೆ. ‘ಮಂಗಳವಾರ ನಡೆಯಬೇಕಾಗಿದ್ದ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮರು ನಿಗದಿಯಾದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ. ‘ಪರೀಕ್ಷೆ ಮುಂದೂಡುವುದಾಗಿ ಮಂಗಳವಾರ ಬೆಳಿಗ್ಗೆ ವಿಶ್ವವಿದ್ಯಾಲಯ ಪ್ರಕಟಿಸಿದೆ. ಮುಷ್ಕರದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಈ ನಿರ್ಧಾರವನ್ನು ಒಂದು ದಿನ ಮುಂಚಿತವಾಗಿ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು. ವಿದ್ಯಾರ್ಥಿಗಳು ಕಾಲೇಜಿಗೆ ಬಂದ ನಂತರ ಪರೀಕ್ಷೆ ಮುಂದೂಡಲಾಗಿದೆ ಎನ್ನುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಬೆಳಿಗ್ಗೆ ಕಷ್ಟಪಟ್ಟು ಕಾಲೇಜಿಗೆ ಬಂದಿದ್ದೇವೆ. ಕೆಲವರು ನಡೆದುಕೊಂಡು ಬಂದಿದ್ದಾರೆ. ಮುಂಚಿತವಾಗಿ ತಿಳಿಸಿದ್ದರೆ ನಮ್ಮ ಪರದಾಟ ತಪ್ಪುತ್ತಿತ್ತು’ ಎಂದು ಕಲಾ ಕಾಲೇಜು ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದರು.
ಸರ್ಕಾರ ಸ್ಪಂದಿಸಲಿ
ಎಲ್ಲ ಡಿಪೊ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ತುಮಕೂರು ಡಿಪೊ–1ರಲ್ಲಿ ಕಳೆದ ವಾರವಷ್ಟೇ ಕೆಲಸಕ್ಕೆ ಸೇರಿದವರು ಖಾಸಗಿ ಬಸ್ ಚಾಲಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂಬ ಮಾಹಿತಿ ಇದೆ. ಸರ್ಕಾರ ಕಾರ್ಮಿಕ ಮುಖಂಡರ ಜತೆ ಮತ್ತೊಮ್ಮೆ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಎ.ಆರ್.ದೇವರಾಜು ಅಧ್ಯಕ್ಷ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.