ಚೇಳೂರು: ಕುಂಚಿಟಿಗ ಸಮುದಾಯದವರು ಒಗ್ಗಟ್ಟಾಗಿದ್ದಾಗ ಮಾತ್ರ ಒಬಿಸಿ, ಮೀಸಲಾತಿ ಪಡೆಯಲು ಸಾಧ್ಯ ಎಂದು ಕುಂಚಿಟಿಗ ಸಮುದಾಯದ ಅಧ್ಯಕ್ಷ ಗಂಗಹನುಮಯ್ಯ ತಿಳಿಸಿದರು.
ದೃಷ್ಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಸೋಮವಾರ ನಡೆದ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕಾರಣಿಗಳು ಮತ ಪಡೆಯಲು ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಸಮುದಾಯವನ್ನು ಮೇಲೆತ್ತುತ್ತಿಲ್ಲ. ಸಣ್ಣಪುಟ್ಟ ಸಮುದಾಯಗಳು ಮೂಲಸೌಕರ್ಯ ಪಡೆದು ಸಮಾಜಮುಖಿಯಾಗಿ ಮುಂದೆ ಬರುತ್ತಿದ್ದು, ಕುಂಚಿಟಿಗ ಸಮುದಾಯವನ್ನು ಮೇಲತ್ತಬೇಕಿದೆ ಎಂದರು.
‘ಸಮುದಾಯದಲ್ಲಿ ಒಗ್ಗಟಿಲ್ಲ. ನಾಲ್ಕು, ಐದು, ಪಂಗಡಗಳನ್ನು ಮಾಡಿಕೊಂಡು ಕುಂಚಿಟಿಗರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದೇವೆ. ನಮ್ಮ ಸಮುದಾಯಕ್ಕೆ ಇತಿಹಾಸವಿದೆ. ದೇಶದ ಐದು ರಾಜ್ಯಗಳಲ್ಲಿ ಕುಂಚಿಟಿಗ ಸಮುದಾಯ ಗುರುತಿಸಿಕೊಂಡಿದ್ದು, ಎಲ್ಲರೂ ಒಗ್ಗಟಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕಿದೆ’ ಎಂದು ತಿಳಿಸಿದರು.
ಕುಂಚಿಟಿಗ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಜೆ. ಜಯಣ್ಣ ಮಾತನಾಡಿ, ‘ಕುಂಚಿಟಿಗರ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಎಲ್ಲ ಮುಖಂಡರು ದೂರ ಸರಿದರೂ ಏಕಾಂಗಿಯಾಗಿ ಸಂಘವನ್ನು ಉಳಿಸಿಕೊಂಡು ಬಂದ ಕಾರಣ ಈಗ ಸಂಘಕ್ಕೆ ನೆಲೆ ಸಿಕ್ಕಿದೆ. ಸಮುದಾಯದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಸಮುದಾಯ ಒಗ್ಗಟ್ಟನ್ನು ಗುರುತಿಸಿಕೊಂಡಿದೆ’ ಎಂದು ತಿಳಿಸಿದರು.
ರಾಜ್ಯ ಕುಂಚಿಟಿಗರ ಸಂಘದ ಅಧ್ಯಕ್ಷ ಕಸವನಹಳ್ಳಿ ರಮೇಶ್, ಕುಂಚಿಟಿಗ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಯೋಗಾನಂದ್, ಕಾರ್ಯದರ್ಶಿ ದೇವರಾಜು, ಸಮುದಾಯದ ಉಮೇಶ್, ನಿಂಗರಾಜು, ಹೆಂಜಾರಪ್ಪ, ಮಂಜುನಾಥ್, ರಾಮಾಂಜಿನಪ್ಪ, ಶ್ರೀಧರ್, ಪ್ರಾಧ್ಯಪಾಕ ರವೀಂದ್ರನಾಥ್, ಮುರುಳಿ, ಪುಟ್ಟಲಿಂಗಯ್ಯ, ಶಿವಮ್ಮ, ಬಾಲಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.