
ಕುಣಿಗಲ್: ಪಟ್ಟಣದ ಕುಂಬಾರಗುಂಡಿ ಸ್ಮಶಾನದಲ್ಲಿ ವರ್ಷದ ಹಿಂದೆ ಉದ್ಘಾಟನೆಯಾದ ವಿದ್ಯುತ್ ಚಿತಾಗಾರ ಕಾರ್ಯಾರಂಭವಾಗುವ ಮೊದಲೇ ಶಿಥಿಲಾವಸ್ಥೆ ತಲುಪಿದೆ.
ಸಂಸದ ಡಿ.ಕೆ. ಸುರೇಶ್ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಿ ಎರಡು ವರ್ಷ ಕಳೆದಿದ್ದರೂ, ಯಂತ್ರೋಪಕರಣ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ತಡವಾದ ಕಾರಣ ಸಂಸದರೆ ಗಮನ ಹರಿಸಿ ಕಳೆದ ವರ್ಷ ಶಾಸಕ ಡಾ.ರಂಗನಾಥ್ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿತ್ತು.
ನಿರ್ವಹಣೆ ಕೊರತೆಯಿಂದಾಗಿ ಚಿತಾಗಾರ ಕಾರ್ಯಾರಂಭ ತಡವಾಗಿದ್ದು, ಪುರಸಭೆಯಿಂದ ನಿರ್ವಹಣೆ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆ ಪಡೆದವರು ಅರ್ಹ ಸಿಬ್ಬಂದಿಗೆ ತರಬೇತಿ ನೀಡಿ ಕಾರ್ಯಾರಂಭ ಮಾಡದ ಕಾರಣ ಮತ್ತೆ ಸ್ಥಗಿತಗೊಂಡಿದೆ.
ಈಗಾಗಲೇ ಎರಡು ಬಾರಿ ಚಿತಾಗಾರದ ಬಾಗಿಲು ಮೀಟಿ ಒಳ ನುಸುಳಿದ ಕಿಡಿಗೇಡಿಗಳು ಸಾಮಗ್ರಿ ಕಳವು ಮಾಡಿದ್ದಾರೆ. ಕಿಟಕಿ ಗಾಜುಗಳನ್ನು ನಿರಂತರವಾಗಿ ಒಡೆದು ಹಾಕಲಾಗುತ್ತಿದ್ದು, ಪುರಸಭೆಯಿಂದ ಅಳವಡಿಕೆ ಕಾರ್ಯ ಮುಂದುವರೆದಿದೆ.
ಕುಲುಮೆ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ನೀಡಿದ ನಂತರ ಪ್ರಯೋಗಿಕವಾಗಿ ಕೆಲ ಪ್ರಾಣಿಗಳ ಕಳೇಬರ ದಹಿಸಿ ಯಶಸ್ವಿಯಾಗಿದ್ದಾರೆಯೇ ಹೊರತು ಜನರಲ್ಲಿ ಜಾಗೃತಿ ಮೂಡಿಸಿ ವಿದ್ಯುತ್ ಚಿತಾಗಾರ ಬಳಕೆಗೆ ಪ್ರಯತ್ನ ಮಾಡುತ್ತಿಲ್ಲ. ಶವಗಳ ಅಂತ್ಯಕ್ರಿಯೆಗೆ ತರುವ ಸಮಯದಲ್ಲಿ ಪುರಸಭೆ ಅವರನ್ನು ಸಂಪರ್ಕಿಸಿದಾಗ ವಿದ್ಯುತ್ ಚಿತಾಗಾರ ಇನ್ನೂ ಕಾರ್ಯಾರಂಭ ಮಾಡುತ್ತಿಲ್ಲ ಎಂಬ ಸಿದ್ಧ ಉತ್ತರ ಅಧಿಕಾರಿ ವರ್ಗದಿಂದ ಕೇಳಿಬರುತ್ತಿದೆ.
ಪಟ್ಟಣದಲ್ಲಿ ಸ್ಮಶಾನಗಳು ಒತ್ತುವರಿಯಾಗುತ್ತಿವೆ. ಸಾರ್ವಜನಿಕ ಸ್ಮಶಾನಗಳನ್ನು ಅಧಿಕೃತ ದಾಖಲೆಗಳೊಂದಿಗೆ ಸಂರಕ್ಷಣೆ ಮಾಡಲು ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಇದೇ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಶವಸಂಸ್ಕಾರಕ್ಕೆ ಜಾಗವಿರದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಿದ್ಯುತ್ ಚಿತಾಗಾರ ಕಾರ್ಯಾರಂಭಕ್ಕೆ ಅಧಿಕಾರಿಗಳು ಗಮನಹರಿಸಬೇಕು ಎನ್ನುತ್ತಾರೆ ನಿವೃತ್ತ ಫಾಮಾಸಿಸ್ಟ್ ಚಂದ್ರಶೇಖರ್.
ವಿದ್ಯುತ್ ಚಿತಾಗಾರ ನಿರ್ವಹಣೆಗೆ ಟೆಂಡರ್ ಕರೆಯಲಾಗಿದ್ದು ಗುತ್ತಿಗೆ ಪಡೆದವರನ್ನು ಸಂಪರ್ಕಿಸಿ ಶೀಘ್ರದಲ್ಲೇ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುವುದು.
-ಚಂದ್ರಶೇಖರ್ ಪುರಸಭೆ ಪರಿಸರ ಎಂಜಿನಿಯರ್
ಬಳಕೆಯಾಗದ ಚಿತಾಗಾರದ ವಿದ್ಯುತ್ ಬಿಲ್ ₹3 ಲಕ್ಷ ವಿದ್ಯುತ್ ಚಿತಾಗಾರ ಬಳಕೆಯಾಗದಿದ್ದರೂ ಒಂದೂ ಶವ ದಹಿಸದಿದ್ದರೂ ವಿದ್ಯುತ್ ಬಿಲ್ ಮಾತ್ರ ₹310386 ಬಿಲ್ ಬಾಕಿ ಉಳಿದಿರುವುದು ಆಚರ್ಯ ಮೂಡಿಸುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.