ADVERTISEMENT

ಕುಣಿಗಲ್: ರಸಗೊಬ್ಬರಕ್ಕೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:01 IST
Last Updated 23 ಸೆಪ್ಟೆಂಬರ್ 2025, 4:01 IST
ಕುಣಿಗಲ್ ಟಿಎಪಿಎಂಎಸ್ ಬಳಿ ಯೂರಿಯಾಕ್ಕಾಗಿ ಸರತಿ ಸಾಲಿನಲ್ಲಿ ನಿಂತ ರೈತರು
ಕುಣಿಗಲ್ ಟಿಎಪಿಎಂಎಸ್ ಬಳಿ ಯೂರಿಯಾಕ್ಕಾಗಿ ಸರತಿ ಸಾಲಿನಲ್ಲಿ ನಿಂತ ರೈತರು   

ಕುಣಿಗಲ್: ತಾಲ್ಲೂಕಿನಲ್ಲಿ ಹದವಾಗಿ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕಾಗಿದೆ. ರೈತರು ರಸಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಭಾನುವಾರ ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮದಲ್ಲಿ ಹಿರಿಯರಿಗೆ ಎಡೆ ಬಿಡುವುದನ್ನು ಬಿಟ್ಟು ರಸಗೊಬ್ಬರಕ್ಕಾಗಿ ಕಾದ ರೈತರು ಗೊಬ್ಬರ ಸಿಗದೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.

ತಾಲ್ಲೂಕಿನಲ್ಲಿ ಖಾಸಗಿ ಮಾರಾಟಗಾರರು ಸೇರಿದಂತೆ 11 ರೈತರ ಸೇವಾ ಸಹಕಾರ ಸಂಘಗಳಲ್ಲಿ ಗೊಬ್ಬರದ ಮಾರಾಟ ವ್ಯವಸ್ಥೆ ಇದ್ದರೂ, ಬೇಡಿಕೆ ತಕ್ಕಂತೆ ಮತ್ತು ಸಕಾಲದಲ್ಲಿ ರಸಗೊಬ್ಬರ ಸಿಗದ ಕಾರಣ ರೈತರು ಪರದಾಟ ಮುಂದುವರೆದಿದೆ.

ADVERTISEMENT

ಒಂದೆಡೆ ಖಾಸಗಿ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದರೂ, ಮಾರಾಟಗಾರರು ಕಂಪನಿಗಳ ಹಿಡಿತದಲ್ಲಿರುವುದರಿಂದ ಯೂರಿಯಾ ಜತೆ ಸಹ ಉತ್ಪಾದಕಗಳನ್ನು ಖರೀದಿಸುವಂತೆ ಕಡ್ಡಾಯಗೊಳಿಸಿರುವುದು ಸಮಸ್ಯೆಯಾಗುತ್ತಿದೆ ಎಂದು ಮಾರಾಟಗಾರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಟಿಎಪಿಎಂಎಸ್ ಸೇರಿದಂತೆ ರೈತರ ಸೇವಾ ಸಹಕಾರ ಸಂಘಗಳು ರಸಗೊಬ್ಬರ ಮಾರಾಟ ಮಾಡುತ್ತಿವೆ. ಬೇಡಿಕೆ ಅನುಸಾರ ಸರಬರಾಜಾಗದ ಕಾರಣ ಲೋಡ್ ಬಂದ ಕೂಡಲೇ ರೈತರು ಖರೀದಿಗೆ ಮುಗಿಬೀಳುತ್ತಿದ್ದಾರೆ. 

ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ತಾಲ್ಲೂಕಿಗೆ 3,675 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದೆ. ಈಗಾಗಲೇ 2,970 ಮೆಟ್ರಿಕ್ ಟನ್ ಸರಬರಾಜಾಗಿದೆ. 704 ಟನ್ ಬಾಕಿ ಇದೆ. ರೈತರಿಗೆ ಯೂರಿಯಾ ಇನ್ನೂ ಬೇಕಿದೆ. ವಾಡಿಕೆಯಂತೆ ಬಿತ್ತನೆ ಕಾರ್ಯ ಅಕ್ಟೋಬರ್ 15ರ ವರೆಗೆ ನಡೆಲಿದೆ. ಮುಂದಿನ ದಿನಗಳಲ್ಲಿ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಾಂತ್ರಿಕ ಅಧಿಕಾರಿ ನೂರ್ ಅಜಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.