ADVERTISEMENT

ಶಾಸಕ ರಂಗನಾಥ್‌ ಕ್ಷಮೆಯಾಚನೆಗೆ ಪಟ್ಟು: ಕುದುರೆ ಫಾರ್ಮ್‌ ರಕ್ಷಣೆಗೆ ನಿರಂತರ ಹೋರಾಟ

* ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ಅವಕಾಶ ನೀಡಲ್ಲ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಡಾ.ರಂಗನಾಥ್
ಡಾ.ರಂಗನಾಥ್   

ಕುಣಿಗಲ್: ಕುಣಿಗಲ್‌ ಸ್ಟಡ್ ಫಾರ್ಮ್‌ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವವರನ್ನು ‘ನಿರುದ್ಯೋಗಿ ರಾಜಕಾರಣಿಗಳು’ ಎಂ‌ದಿರುವ ಶಾಸಕ ಡಾ.ರಂಗನಾಥ್ ಅವರ ಹೇಳಿಕೆ ಖಂಡಿಸಿ ಸ್ಟಡ್ ಫಾರ್ಮ್‌ ರಕ್ಷಣಾ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ಶಾಸಕರ ಕ್ಷಮೆಯಾಚಿಸಲು ಒತ್ತಾಯಿಸಿದರು.

ಕನ್ನಡ ಭನವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪದಾಧಿಕಾರಿಗಳು ಹೋರಾಟ ತೀವ್ರಗೊಳಿಸುವ ನಿರ್ಧಾರ ಕೈಗೊಂಡರು.

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ‘ಅಧಿಕಾರದಲ್ಲಿದ್ದರೆ ಮಾತ್ರ ಉದ್ಯೋಗಿ ರಾಜಕಾರಣಿಗಳಲ್ಲ. ಶಾಸಕ ಡಾ.ರಂಗನಾಥ್ ವೈದ್ಯರಾಗಿ ಉದ್ಯೋಗದಲ್ಲಿದ್ದರೂ, ತಾಲ್ಲೂಕಿಗೆ ರಾಜಕಾರಣಿಯಾಗಿ ಬಂದು ಜನಸೇವೆ ಮಾಡುವ ಬದಲು ವ್ಯವಹಾರ ಮಾಡುತ್ತಿದ್ದಾರೆ. ಆರು ವರ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಕಳೆದ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿ ಸ್ಥಗಿತಗೊಂಡಿವೆ. ಕುದುರೆ ಫಾರ್ಮ್‌ ಉಳಿವಿಗಾಗಿ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ಅವಕಾಶ ನೀಡುವುದಿಲ್ಲ. ಏಕಾಂಗಿಯಾದರೂ ಹೋರಾಟ ಮುಂದುವರೆಸುತ್ತೇನೆ’ ಎಂದರು.

ADVERTISEMENT

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಹೋರಾಟ ತೀವ್ರವಾಗುತ್ತಿದ್ದಂತೆ ಶಾಸಕ ಡಾ.ರಂಗನಾಥ್ ಗೊಂದಲ ಸೃಷ್ಟಿಸುತ್ತಿದ್ದಾರೆ. ನಿಲವು ಸ್ಪಷ್ಟಪಡಿಸಲು ಶಾಸಕರು ವಿಫಲರಾಗುತ್ತಿದ್ದಾರೆ. ಶಾಸಕ, ಸಂಸದರ ಸೂಚನೆ ಮೇರೆಗೆ ರಾಜ್ಯಮಟ್ಟದಲ್ಲಿ ಕಡತ, ದಾಖಲೆ ಸಿದ್ಧವಾಗುತ್ತಿವೆ ಎಂದು ಟೀಕಿಸಿದರು.

ತಾಲ್ಲೂಕಿಗೆ 2018ರಲ್ಲಿ ರಾಜಕಾರಣಿಯಾಗಿ ಉದ್ಯೊಗ ಮಾಡಲು ಬಂದ ಶಾಸಕರು, ಬಂಡವಾಳ ಹೂಡಿ ವ್ಯವಹಾರ ಮಾಡುತ್ತಾ ವ್ಯವಹಾರಸ್ಥ, ರಾಜಕಾರಣಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಮುಖಂಡ ರಾಜೇಶ್ ಗೌಡ, ‘ಶಾಸಕರು ವೈದ್ಯಕೀಯ ವೃತ್ತಿಯಲ್ಲಿದ್ದು, ಸೇವೆಯ ನೆಪದಲ್ಲಿ ರಾಜಕಾರಣಕ್ಕೆ ಬಂದು ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ಈಗ ಸರ್ಕಾರಿ ಭೂಮಿಯ ಮೇಲೂ ಕಣ್ಣು ಹಾಕಿದ್ದಾರೆ. ಕುದುರೆ ಫಾರ್ಮ್‌ ಬಗ್ಗೆ ಅವರು ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಪದಾಧಿಕಾರಿಗಳಾದ ಜಿ.ಕೆ.ನಾಗಣ್ಣ, ಶಿವಶಂಕರ್, ವರದರಾಜು, ಅಬ್ದುಲ್ ಮುನಾಫ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮ, ಅಮ್ ಆದ್ಮಿಯ ಜಯರಾಮಯ್ಯ, ರೈತ ಸಂಘದ ಕರಿಗೌಡ, ವೆಂಕಟೇಶ್‌, ಕರವೇ ಅಧ್ಯಕ್ಷ ಮಂಜುನಾಥ್, ಬಜರಂಗದಳದ ಗಿರೀಶ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.