ಕುಣಿಗಲ್ ತಾಲ್ಲೂಕನ್ನು ತುಮಕೂರು ಜಿಲ್ಲೆಯಲ್ಲಿ ಉಳಿಸಲು ನಡೆಸಿದ ಸಭೆಯಲ್ಲಿ ತಾಲ್ಲೂಕಿನ ಮುಖಂಡರು ಭಾಗವಹಿಸಿದ್ದರು
ಕುಣಿಗಲ್: ಕುಣಿಗಲ್ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲು ತೆರೆಮರೆಯಲ್ಲಿ ನಡೆಯುತ್ತಿರುವ ಕಸರತ್ತನ್ನು ಖಂಡಿಸಿ ತಾಲ್ಲೂಕಿನ ಸಮಾನ ಮನಸ್ಕರು ಸಭೆ ನಡೆಸಿ ತುಮಕೂರು ಜಿಲ್ಲೆಯಲ್ಲಿ ಉಳಿಸಲು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಪಟ್ಟಣದ ಕನ್ನಡ ಭವನದಲ್ಲಿ ಶುಕ್ರವಾರ ಸಭೆ ನಡೆಯಿತು.
‘ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಯತ್ನದಲ್ಲಿ ಶಾಸಕರ ಪಾತ್ರ ಪ್ರಮುಖವಾಗಿದೆ. ಇದರ ಹಿಂದೆ ಭೂ ಮಾಫಿಯ ಅಡಗಿದೆ. ಜಿಲ್ಲೆಯಲ್ಲಿ ಶಾಸಕ ಡಾ.ರಂಗನಾಥ ಅವರ ರಾಜಕೀಯ ಬೇಳೆ ಬೇಯದ ಕಾರಣ ಷಡ್ಯಂತ್ರ ನಡೆಸಿದ್ದಾರೆ. ಭೂ ಮಾಫಿಯ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅಡ್ಡವಾಗಿರುವ ಕಾರಣ ತಮ್ಮ ಮತ್ತು ತಮ್ಮ ಸಂಬಂದಿ ಡಿ.ಕೆ.ಎಸ್ ಸಹೋದರರ ಪ್ರಾಬಲ್ಯ ಹೆಚ್ಚಾಗಿರುವ ಕಡೆ ತಾಲ್ಲೂಕು ಸೇರಿಸುವುದರಿಂದ ಹೆಚ್ಚಿನ ಲಾಭ ಮಾಡಿಕೊಳ್ಳಲು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲು ಸಂಚು ಮಾಡುತ್ತಿದ್ದಾರೆ. ಶಾಸಕರು ಮೊದಲಿಗೆ ಸ್ಟಡ್ ಫಾರಂ ಬಗ್ಗೆ ನಂತರ ಲಿಂಕ್ ಕೆನಾಲ್ ಬಗ್ಗೆ, ಈಗ ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಲು ಸಂಚು ನಡೆಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಸಭೆಯಲ್ಲಿ ಮುಖಂಡರು ದೂರಿದರು.
ಕೇವಲ ನಾಲ್ಕು ಜನ ಕುಣಿಗಲ್ ಅನಿವಾಸಿಗಳು ಶಾಸಕರ ಸೂಚನೆ ಮೇರೆಗೆ ಮನೆಯೊಂದರಲ್ಲಿ ಸೇರಿ ಕುಣಿಗಲ್ ತಾಲ್ಲೂಕಿನ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ದೃಷ್ಟಿಯಿಂದ ನಿರ್ಣಯ ಕೈಗೊಂಡು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಮನವಿ ಪುರಸ್ಕಾರಗೊಂಡು ಕಂದಾಯ ಇಲಾಖೆಗೆ ವರದಿ ಕೇಳಿದೆ ಎಂದ ಮೇಲೆ ಚಟುವಟಿಕೆಯ ತೀವ್ರತರ ಗಮನಿಸಬೇಕಿದೆ. ತಾಲ್ಲೂಕಿನ ಹುಲಿಯೂ
ರುದುರ್ಗವನ್ನು ತಾಲ್ಲೂಕು ಕೇಂದ್ರ ಮಾಡಲು ಹತ್ತು ಹಲವು ಹೋರಾಟ ಮಾಡಿ ಮನವಿ ಸಲ್ಲಿಸಿದ್ದರೂ, ಪರಿಗಣಿಸದ ಸರ್ಕಾರ ಕೆಲವೇ ಅನಿವಾಸಿಗಳ ಮನವಿಗೆ ಸ್ಪಂದಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ.
ತಾಲ್ಲೂಕಿನಿಂದ ಜೀವನಕ್ಕಾಗಿ ಬೆಂಗಳೂರು ಸೇರಿರುವ ಕೆಲವೇ ಅನಿವಾಸಿಗಳು, ತಾಲ್ಲೂಕಿನ ಜನರೊಂದಿಗೆ ಚರ್ಚಿಸದೆ, ಶಾಸಕರ ತಾಳಕ್ಕೆ ತಕ್ಕಂತೆ ಕುಣಿದು ನಡೆಸುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆಗೆ ತಾಲ್ಲೂಕಿನ ಜನರ ವಿರೋಧವಿದೆ. ಅಖಂಡ ಜಿಲ್ಲೆಯನ್ನು ಹೋಳು ಮಾಡಲು ಹೊರಟಿರುವ ಕಾರ್ಯಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಸಭೆಯಲ್ಲಿ ಕುಣಿಗಲ್ ತಾಲ್ಲೂಕನ್ನು ತುಮಕೂರು ಜಿಲ್ಲೆಯಲ್ಲಿ ಉಳಿಸುವ ಸಮಿತಿ ರಚಿಸಿ, ಕೂಡಲೇ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಗ್ರಾ.ಪಂ. ಮಟ್ಟದಿಂದ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್, ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್, ಬೀಚನಹಳ್ಳಿ ಕರಿಗೌಡ, ವಕೀಲರ ಸಂಘದ ಅಧ್ಯಕ್ಷ ಸಿಂಗಯ್ಯ, ಅಡಿಟರ್ ಸಂಘದ ಅಧ್ಯಕ್ಷ ಸುರೇಶ್, ಅಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎ. ಜಯರಾಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಬಿ.ಎಂ. ಹುಚ್ಚೇಗೌಡ, ಸ್ನೇಹಕಲಾ ಪ್ರತಿಷ್ಠಾನದ ದಿನೇಶ ಕುಮಾರ್, ಕಸಾಪ ಅಧ್ಯಕ್ಷ ಕಪನಿಪಾಶ್ಯ ರಮೇಶ, ತಾಲ್ಲೂಕು ಕಾಂಗ್ರೆಸ್ ಮಾಜಿ ಪ್ರದಾನ ಕಾರ್ಯದರ್ಶಿ ಶಿವರಾಂ, ಸವಿತ ಸಮಾಜದ ನಾರಾಯಣಸ್ವಾಮಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶಾಂತಕುಮಾರಿ, ದಲಿತ ಸಂಘರ್ಷ ಸಮಿತಿ ಶಿವಶಂಕರ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಕೆ.ಎಲ್.ಹರೀಶ್, ಕಲ್ಲನಾಯಕನಹಳ್ಳಿ ಶಿವಣ್ಣ, ತರಿಕೆರೆ ಪ್ರಕಾಶ್, ಜಿ.ಕೆ.ನಾಗಣ್ಣ, ರಂಗಸ್ವಾಮಿ, ಎಡೆಯೂರು ದೀಪೂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.