ಬಂಧನ
(ಪ್ರಾತಿನಿಧಿಕ ಚಿತ್ರ)
ಕುಣಿಗಲ್ (ತುಮಕೂರು): ದೇವಸ್ಥಾನಕ್ಕೆ ತೆರಳಿದ್ದ ಪರಿಶಿಷ್ಟ ಜಾತಿಯ ಮಹಿಳೆ, ಆಕೆಯ ತಾಯಿ ಮತ್ತು ತಂಗಿಯನ್ನು ದೇವಸ್ಥಾನದ ಅರ್ಚಕ ಮತ್ತಿತರರು ಸೇರಿ ದೇವಸ್ಥಾನದಿಂದ ಹೊರದಬ್ಬಿದ್ದಾರೆ.
ಬೆಂಗಳೂರು–ಮಾಗಡಿ ರಸ್ತೆಯ ಅಂದ್ರಳ್ಳಿ ನಿವಾಸಿ ರೋಜಾ ತನ್ನ ತವರುಮನೆ ಇರುವ ಯಡಿಯೂರು ಹೋಬಳಿ ತಿಗಳರಪಾಳ್ಯ ಗ್ರಾಮಕ್ಕೆ ಮಾರಮ್ಮ ದೇವಿ ಹಬ್ಬಕ್ಕೆ ಬಂದಿದ್ದರು.
ಸೋಮವಾರ ರಾತ್ರಿ ಗ್ರಾಮದ ವೆಂಕಟರಮಣ ಮೂಡಲಗಿರಿ ದೇವಾಲಯಕ್ಕೆ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಹೋಗಿದ್ದರು.
‘ದೇವಸ್ಥಾನದ ಒಳಗೆ ಪ್ರವೇಶಿಸಿದಾಗ ಅರ್ಚಕ ಹನುಮಯ್ಯ, ಗ್ರಾಮದ ಜಯಲಕ್ಷ್ಮಮ್ಮ, ಶ್ರೀನಿವಾಸ್ ಹಾಗೂ ಇತರ 16 ಜನ ಸೇರಿಕೊಂಡು ಹೊರ ಹೋಗುವಂತೆ ನಿಂದಿಸಿದ್ದಾರೆ’ ಎಂದು ಮಹಿಳೆ ಅಮೃತೂರು ಠಾಣೆಗೆ ದೂರು ನೀಡಿದ್ದಾರೆ.
‘ನೀನು ಕೀಳು ಜಾತಿಯವಳು. ದೇವಸ್ಥಾನದ ಒಳಗೆ ಬರಬಾರದು’ ಎಂದು ಜಾತಿ ಹಿಡಿದು ನಿಂದಿಸಿ, ಗಲಾಟೆ ಮಾಡಿ ತಲೆಯ ಕೂದಲು ಹಿಡಿದು ಎಳೆದಾಡಿದರು. ನಂತರ ದೇವಸ್ಥಾನದಿಂದ ಹೊರಗೆ ತಳ್ಳಿದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ದೇಗುಲದ ಅರ್ಚಕರನ್ನು
ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.