ADVERTISEMENT

ಇಂದಿನಿಂದ ಕುಪ್ಪೂರು ಮರುಳಸಿದ್ದೇಶ್ವರ ಜಾತ್ರೆ

ಡಿ.12ರಂದು ಸಿ.ಎಂ.ಯಡಿಯೂರಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 16:00 IST
Last Updated 10 ಡಿಸೆಂಬರ್ 2019, 16:00 IST
ಯತೀಶ್ವರ ಶಿವಾಚಾರ್ಯ ಸ್ವಾಮೀಜಿ
ಯತೀಶ್ವರ ಶಿವಾಚಾರ್ಯ ಸ್ವಾಮೀಜಿ   

ಚಿಕ್ಕನಾಯಕನಹಳ್ಳಿ: ಡಿ. 12ರಂದು ನಡೆಯುವ ಕುಪ್ಪೂರು ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬರಲಿದ್ದಾರೆ ಎಂದು ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಡಿ. 11, 12, 13ರಂದು ಮೂರು ದಿನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆ ಆರಂಭದ ದಿನವಾದ ಡಿ.11ರಂದು ಬೆಳಿಗ್ಗೆ ಅಭಿಷೇಕ, ಸಹಸ್ತ್ರ ಬಿಲ್ವಾರ್ಚನೆ ಪೂಜೆಗಳು ನಡೆಯಲಿವೆ. ಮರಳುಸಿದ್ಧರ ವಿಗ್ರಹದ ಉತ್ಸವವನ್ನು ಆನೆ ಮೇಲೆ ಹೊತ್ತೊಯ್ಯಲಾಗುವುದು. ಧಾರ್ಮಿಕ ಕಾರ್ಯಕ್ರಮ 12.10ಕ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಡಿ. 12ರಂದು ನಡೆಯುವ ಧರ್ಮ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸುವರು.

ADVERTISEMENT

ಈ ಬಾರಿ ವಿಶೇಷವಾಗಿ ಮಠದ ಗುರು ಮರುಳಸಿದ್ದೇಶ್ವರ ಮಹಾಪುರಾಣ ವ್ಯಾಖ್ಯಾನ ಗ್ರಂಥ ಬಿಡುಗಡೆ ಆಗಲಿದ್ದು, ಇದರ ಅಂಗವಾಗಿ ಭಕ್ತರಿಗೆ ಬೂಂದಿ ಪ್ರಸಾದ ಇರಲಿದೆ ಎಂದರು.

13ರಂದು ಗುರುಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. 11ರಂದು ಷಡಕ್ಷರಿ ಶಾಸ್ತ್ರಿ ಮತ್ತು ಮಠದ ವೈದಿಕ ವೃಂದದವರಿಂದ ನಾಂದಿ, ಪಂಚಕಳಸ, ಸ್ಥಾಪನಾಪೂರ್ವಕ, ರುದ್ರಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಕಲಶ ಸ್ಥಾಪನೆ ಪೂಜಾ ಕೈಂಕರ್ಯ ನಡೆಯಲಿದೆ.

12ರಂದು ಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾಲಿಂಗಕ್ಕೆ ಮಹಾರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ತ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನಡೆಯಲಿದೆ.

ನಂದೀಶ್ವರನಿಗೆ ವಿಶೇಷ ಅಲಂಕಾರ ಪೂಜೆ, ಮರುಳಸಿದ್ದೇಶ್ವರ ಸ್ವಾಮಿಯ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ, ವೃಷಭೋತ್ಸವ, ಕೃತಿಕೋತ್ಸವ, ನಂದಿಧ್ವಜ, ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಚಂಡೆವಾದ್ಯ ವಿವಿಧ ವೈಭವದೊಂದಿಗೆ ಉತ್ಸವ ನಡೆಯಲಿದೆ.

ಪ್ರಶಸ್ತಿ

‘ಕುಪ್ಪೂರು ಮರುಳಸಿದ್ದಶ್ರೀ’ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಹಾಗೂ ‘ಧರ್ಮನಂದಿನಿ’ ಪ್ರಶಸ್ತಿಯನ್ನು ಅರವಳಿಕೆ ತಜ್ಞರಾದ ಡಾ.ಎಸ್.ಪಿ.ನಾಗರತ್ನಾ ಅವರಿಗೆ ಮತ್ತು ‘ಧರ್ಮರತ್ನಾಕರ’ ಪ್ರಶಸ್ತಿಯನ್ನು ಬೆಂಗಳೂರಿನ ವೈಟ್ ಫೀಲ್ಡ್ ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಶಿವರಾಜ್ ಅವರಿಗೆ ನೀಡಲಿದ್ದಾರೆ.

12ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.