ADVERTISEMENT

ಪಾವಗಡ: ವೈಚಾರಿಕ ಪ್ರಜ್ಞೆಯ ಕವಿ ಕುವೆಂಪು

‘ಶತಮಾನ ಸಂಭ್ರಮದ ನಾಡಗೀತೆ ಜಾಗೃತಿ ಬೈಕ್ ಜಾಥಾ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:55 IST
Last Updated 1 ಡಿಸೆಂಬರ್ 2025, 7:55 IST
ಪಾವಗಡ ತಾಲ್ಲೂಕು ವೈಎನ್ ಹೊಸಕೋಟೆ ಹೋಬಳಿ ಪೋತಗಾನಹಳ್ಳಿಯಲ್ಲಿ ಶತಮಾನ ಸಂಭ್ರಮದ ನಾಡಗೀತೆ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ ನೀಡಲಾಯಿತು
ಪಾವಗಡ ತಾಲ್ಲೂಕು ವೈಎನ್ ಹೊಸಕೋಟೆ ಹೋಬಳಿ ಪೋತಗಾನಹಳ್ಳಿಯಲ್ಲಿ ಶತಮಾನ ಸಂಭ್ರಮದ ನಾಡಗೀತೆ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ ನೀಡಲಾಯಿತು   

ಪಾವಗಡ: ಕನ್ನಡ ಸಾಹಿತ್ಯದ ಮೂಲಕ ವೈಚಾರಿಕ ಪ್ರಜ್ಞೆ ಕಟ್ಟಿಕೊಟ್ಟ ಶ್ರೇಷ್ಠ ಕವಿ ಕುವೆಂಪು ಎಂದು ವಕೀಲ ಎಂ.ನಾಗೇಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ವೈ.ಎನ್‌. ಹೊಸಕೋಟೆ ಹೋಬಳಿ ಪೋತಗಾನಹಳ್ಳಿಯಲ್ಲಿ ಕುವೆಂಪು ಜನ್ಮದಿನಾಚರಣೆ ಸಮಿತಿ ಭಾನುವಾರ ಆಯೋಜಿಸಿದ್ದ ‘ಶತಮಾನ ಸಂಭ್ರಮದ ನಾಡಗೀತೆ ಜಾಗೃತಿ ಬೈಕ್ ಜಾಥಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವಿ ಕುವೆಂಪು ವೈಚಾರಿಕ ಅರಿವಿನ ಮೂಲಕ ವಿಶ್ವಮಾನವ ಸಂದೇಶ ಕೊಟ್ಟವರು. ಮೌಢ್ಯಗಳನ್ನು ಮೀರಿ ಬೆಳಯಬೇಕು ಎಂದು ತಿಳುವಳಿಕೆ ನೀಡಿದವರು. ಅಂತಹ ಮಹಾನ್ ಚೇತನದ ಚಿಂತನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪಸರಿಸುವ ಸಲುವಾಗಿ ಪೋತಗಾನಹಳ್ಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ADVERTISEMENT

ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಈ ಕಾರ್ಯಕ್ರಮ ಗ್ರಾಮದಲ್ಲಿ ಹಿರಿಯರು, ಮಕ್ಕಳು ಎಲ್ಲರನ್ನೂ ಸೇರಿಸಿಕೊಂಡು ರೂಪುಗೊಳ್ಳಬೇಕು. ಕುವೆಂಪು ವಿಚಾರಧಾರೆ ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂದರು.

ನಿವೃತ್ತ ಉಪನಿರ್ದೇಶಕ ಬಸವಲಿಂಗಪ್ಪ, ಗ್ರಾಮಗಳಿಗೂ ಕುವೆಂಪು ವಿಚಾರಗಳನ್ನು ತಂದು ಮುಟ್ಟಿಸುತ್ತಿರುವ ಹರಿಕೃಷ್ಣ ಮತ್ತು ತಂಡದವರ ಶ್ರಮ ಮೆಚ್ಚುವಂತಹದ್ದು. ಕುವೆಂಪು ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಎಲ್ಲಾ ಪಂಚಾಯಿತಿಗಳಲ್ಲಿ ಕಾರ್ಯಕ್ರಮಗಳ ಮೂಲಕ ಮಾಡಬೇಕು ಎಂದು ತಿಳಿಸಿದರು.

ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹೊ.ಮ.ನಾಗರಾಜು, ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಪ್ರಜ್ಞೆ ಮಲೆನಾಡಿನಿಂದ ಗ್ರಾಮೀಣ ಪ್ರದೇಶಕ್ಕೂ ಪಸರಿಸುತ್ತಿರುವುದು ಸಂತಸದ ವಿಷಯ. ವಿಶ್ವಕವಿ ರಚಿಸಿರುವ ನಾಡಗೀತೆ ಪ್ರಸ್ತುತ ಶತಮಾನ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಬೈಕ್ ಜಾಥಾ ಮೂಲಕ ನಾಡಗೀತೆ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಕಾರ್ಯಕ್ರಮಗಳು ಕನ್ನಡ ಸಂಘಟನೆಗಳಿಂದ ನಿರಂತರವಾಗಲಿ ಎಂದರು.

ಪೋತಗಾನಹಳ್ಳಿ ಕುವೆಂಪು ವೃತ್ತದಲ್ಲಿ ಎಂ.ನಾಗೇಂದ್ರಪ್ಪ ಅವರು ಹಸಿರು ನಿಶಾನೆ ತೋರಿಸುವ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಪೋತಗಾನಹಳ್ಳಿ, ಹೊಸದುರ್ಗ, ವೈ.ಎನ್.ಹೊಸಕೋಟೆ, ಆರ್.ಡಿ.ರೊಪ್ಪ, ದಳವಾಯಿಹಳ್ಳಿ, ಭೀಮನಕುಂಟೆ, ಕುಣಿಹಳ್ಳಿ ಮತ್ತು ಇಂದ್ರಬೆಟ್ಟ ಗ್ರಾಮಗಳ ಮೂಲಕ ಸಾಗಿ ಪೋತಗಾನಹಳ್ಳಿಯಲ್ಲಿ ಕೊನೆಗೊಂಡಿತು.

ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ನಾಡಗೀತೆ ಹಾಡುವ ಮೂಲಕ ಸಂಭ್ರಮಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಕುವೆಂಪು ಜನ್ಮದಿನಾಚರಣೆ ಸಮಿತಿ ಅಧ್ಯಕ್ಷೆ ಎಚ್. ಮಂಜುಳ, ಗೌರವ ಅಧ್ಯಕ್ಷ ಸಿ.ಪಾತನ್ನ, ಉಪಾಧ್ಯಕ್ಷ ಪಿ.ಆರ್.ಮಾರುತೀಶ್, ಎಚ್.ರಾಮಕೃಷ್ಣ, ಸಮಿತಿ ಸದಸ್ಯ ಚೈತನ್ಯ ಪ್ರಭು, ಬಲರಾಮ, ನಾರಾಯಣಪ್ಪ, ಸಿಆರ್‌ಪಿ ನಾಗರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.