
ತುಮಕೂರು: ಕಾರ್ಮಿಕ ಸಂಹಿತೆ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫೆ. 12ರಂದು ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಇದರ ಪ್ರಯುಕ್ತ ನಗರದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಯಿತು.
ಜೆಸಿಟಿಯು, ಸಂಯುಕ್ತ ಹೋರಾಟ ಕರ್ನಾಟಕದಿಂದ ರೈತ– ಕಾರ್ಮಿಕರ ಸಮಾವೇಶ ಆಯೋಜಿಸಲಾಗಿತ್ತು. ಮುಷ್ಕರದ ಭಾಗವಾಗಿ ಕೈಗಾರಿಕೆಗಳು ಬಂದ್ ಆಗಲಿವೆ. ಕಾರ್ಮಿಕರು, ರೈತರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲರೂ ಸ್ವಯಂ ಪ್ರೇರಿತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
‘ಸರ್ಕಾರಗಳು ಶರವೇಗದಲ್ಲಿ ರೈತ– ಕಾರ್ಮಿಕರ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಕಾರ್ಪೊರೇಟ್ ದಣಿಗಳ ಸೇವೆಯಲ್ಲಿ ತೊಡಗಿವೆ. ಬೆಂಬಲ ಬೆಲೆ, ಕನಿಷ್ಠ ಕೂಲಿ ನಿರಾಕರಿಸಲಾಗುತ್ತಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಂತೇಶ್ ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ತ್ರಿಪಕ್ಷೀಯ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಿಲ್ಲಿಸಲಾಗಿದೆ. ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ಬಂಡವಾಳ ಶಾಹಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗಿರೀಶ್, ‘ಕೇಂದ್ರದಲ್ಲಿ ಜಿಜೆಪಿ ಅಧಿಕಾರಕ್ಕೆ ಬಂದ ನಂತರ ದುಡಿಯುವ ಜನರಿಗೆ ಸಂಕಷ್ಟ ತಂದೊಡ್ಡುತ್ತಿದೆ. ನಮ್ಮ ಹಕ್ಕು ಉಳಿಸಿಕೊಳ್ಳಲು ದುಡಿಯುವ ಜನ ಮುಂದಾಗಬೇಕು’ ಎಂದರು.
ವಿವಿಧ ಸಂಘಟನೆಗಳ ಮುಖಂಡರಾದ ಮಂಜುಳಾ ಗೋನವಾರ, ಶಂಕರಪ್ಪ, ಬಿ.ಉಮೇಶ್, ಸ್ವಾಮಿ, ಕಂಬೇಗೌಡ, ಸೈಯದ್ ಮುಜೀಬ್, ರೇಖಾ, ಚಂದ್ರಶೇಖರ್, ಜಿ.ಕಮಲಾ, ಬಿ.ಷಣ್ಮಖಪ್ಪ ಇತರರು ಹಾಜರಿದ್ದರು.
ರೈತ ವಿರೋಧಿ ಸರ್ಕಾರ
ಸರ್ಕಾರಗಳು ರೈತ ವಿರೋಧಿಯಾಗಿವೆ. ಬಲವಂತದ ಭೂಸ್ವಾಧೀನ ಮಾಡಲಾಗುತ್ತಿದೆ. ಬೆಂಬಲ ಬೆಲೆ ನಿಗದಿಗೆ ಹಿಂದೇಟು ಹಾಕುತ್ತಿವೆ. ಬಿತ್ತನೆ ಬೀಜಗಳ ಮಸೂದೆ ಮೂಲಕ ರೈತರನ್ನು ಕಾರ್ಪೊರೇಟ್ ಗುಲಾಮಗಿರಿಗೆ ತಳ್ಳಿವೆ. ವಿದ್ಯುತ್ ಕಾಯ್ದೆಯಿಂದ ಜನತೆಯ ಸುಲಿಗೆಗೆ ಹೊರಟಿವೆ. ಇದರ ವಿರುದ್ಧ ಎಲ್ಲರು ಒಂದಾಗಿ ಚಳವಳಿ ಕಟ್ಟಬೇಕು. ಎ.ಗೋವಿಂದರಾಜು ಜಿಲ್ಲಾ ಅಧ್ಯಕ್ಷ ರಾಜ್ಯ ರೈತ ಸಂಘ
ಸರ್ಕಾರ ಜನಕಲ್ಯಾಣ ಪರಿಕಲ್ಪನೆಯಿಂದ ಹಿಂದೆ ಸರಿದು ಕಾರ್ಪೊರೇಟ್ ಕಲ್ಯಾಣಕ್ಕೆ ನಿಂತಿದೆ. ಜನತೆ ಒಂದಾಗಿ ಇದನ್ನು ವಿರೋಧಿಸಬೇಕು–ಸಿ.ಯತಿರಾಜು ಸಂಚಾಲಕರು ಸಂಯುಕ್ತ ಹೋರಾಟ ಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.