ADVERTISEMENT

ವನ್ಯಧಾಮದಲ್ಲಿಲ್ಲ ಮೇವಿನ ಸೌಕರ್ಯ

ಆಹಾರ ಅರಸಿ ಜಮೀನುಗಳಿಗೆ ಲಗ್ಗೆ ಇಡುವ ಕೃಷ್ಣಮೃಗಗಳು: ರೈತರು ಹೈರಾಣು

ಗಂಗಾಧರ್ ವಿ ರೆಡ್ಡಿಹಳ್ಳಿ
Published 15 ಫೆಬ್ರುವರಿ 2021, 7:12 IST
Last Updated 15 ಫೆಬ್ರುವರಿ 2021, 7:12 IST
ಲತಾ
ಲತಾ   

ಕೊಡಿಗೇನಹಳ್ಳಿ: ಹೋಬಳಿಯ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮದಲ್ಲಿ ಸರಿಯಾದ ಮೇವಿನ ಸೌಕರ್ಯವಿಲ್ಲದಿರುವ ಕಾರಣ ಕೃಷ್ಣಮೃಗಗಳು ಆಹಾರಕ್ಕಾಗಿ ಸುತ್ತಮುತ್ತಲಿನ ಜಮೀನುಗಳಿಗೆ ಲಗ್ಗೆಯಿಡುತ್ತಿವೆ. ಬೆಳೆಯು ಇಲ್ಲದೇ, ಅರಣ್ಯ ಇಲಾಖೆಯಿಂದ ಸರಿಯಾದ ಪರಿಹಾರವು ಇಲ್ಲದೇ ರೈತರು ಹೈರಾಣಾಗುತ್ತಿದ್ದಾರೆ.

ಕೃಷ್ಣಮೃಗ ವನ್ಯಧಾಮ ಸುಮಾರು 850 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿ ಅಪರೂಪದ ಕಷ್ಣಮೃಗಗಳ ಸಂತತಿ ಇರುವುದರಿಂದ ವನ್ಯಜೀವಿಪ್ರಿಯರನ್ನು ಆಕರ್ಷಿಸುತ್ತಿದೆ. ಆದರೆ ಪ್ರವಾಸಿತಾಣದಲ್ಲಿನ ಕೃಷ್ಣಮೃಗಗಳು ಹಾಗೂ ಜಿಂಕೆಗಳು ಆಹಾರ ಅರಸುತ್ತ ದೂರದ ಜಮೀನಗಳ ಕಡೆ ಮುಖಮಾಡಿವೆ.

ಹಿಂದೆ ಉತ್ತಮ ಮಳೆ ಹಾಗೂ ನೀರಿನ ಅನುಕೂಲವಿದ್ದರಿಂದ ವನ್ಯಧಾಮದಲ್ಲೇ ಹುರಳಿ, ಮೆಕ್ಕೆಜೋಳ, ತೊಗರಿ ಮತ್ತು ಅಲಸಂದಿ ಬಿತ್ತನೆ ಮಾಡಲಾಗುತ್ತಿತ್ತು. ಚೆಕ್‌ಡ್ಯಾಮ್ ಹಾಗೂ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕೊರತೆ ಹೆಚ್ಚಾಗುತ್ತಿರುವುದರಿಂದ ಮೇವು ಮತ್ತು ನೀರಿನ ಸಮಸ್ಯೆ ಎದುರಾಗುತ್ತಿದೆ. 1,200 ಅಡಿ ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಸಿಗದಂತಾಗಿದೆ. ಇದರಿಂದ ಆಹಾರ ಮತ್ತು ನೀರನ್ನು ಅರಸಿ ಹೊರಟ ಕೃಷ್ಣಮೃಗಗಳು ಐಡಿಹಳ್ಳಿ, ಕಡಗತ್ತೂರು, ಕಲಿದೇವಪುರ, ವಿಠಲಾಪುರ, ಆಂಧ್ರಪ್ರದೇಶದ ಮಡಕಶಿರಾ ಜೊತೆಗೆ ಪಾವಗಡದ ಸಮೀಪದವರೆಗೂ ತೆರಳುತ್ತಿವೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಅನೇಕ ಬಾರಿ ಕೃಷ್ಣಮೃಗಗಳು ಆಹಾರ-ನೀರು ಹುಡುಕುವ ತವಕದಲ್ಲಿ ಅಫಘಾತಗಳಾಗಿ ಮೃತಪಟ್ಟಿರುವ ನಿದರ್ಶನಗಳೂ ಇವೆ. ಕೆಲ ವರ್ಷಗಳ ಹಿಂದೆ ಕಲಿದೇವಪುರದ ಹೊರವಲಯದ ಜಮೀನಿನಲ್ಲಿ ಅವರೆಕಾಯಿ ಮತ್ತು ಅದರ ಬಳ್ಳಿ ತಿಂದು ಸತ್ತಿತ್ತು. ಸಿಂಗನಹಳ್ಳಿ– ಮಸರಪಡಿ ಗ್ರಾಮಗಳ ಮಧ್ಯೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿತ್ತು. ಕಡಗತ್ತೂರು-ಯಾಕಾರ್ಲಹಳ್ಳಿ ಗ್ರಾಮಗಳ ಮಧ್ಯೆ ಅಫಘಾತಕ್ಕೀಡಾದ ಮತ್ತು ಪುರವರ ಸಮೀಪದ ಗ್ರಾಮದ ಜಮೀನವೊಂದರಲ್ಲಿ ಸಿಕ್ಕ ಕೃಷ್ಣಮೃಗ ಮರಿಯೊಂದರನ್ನು ಹಿಡಿದ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದರು.

ಆಹಾರಕ್ಕಾಗಿ ಅಲೆಯುವ ಪ್ರಾಣಿಗಳು ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಆದ್ದರಿಂದ ಅರಣ್ಯ ಇಲಾಖೆಯವರು ವನ್ಯಧಾಮದ ಸುತ್ತಲು ತಡೆಗೋಡೆ ಅಥವಾ ಮುಳ್ಳುಬೇಲಿ ನಿರ್ಮಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ನೀರು-ಮೇವು ಅನುಕೂಲ ಕಲ್ಪಸಬೇಕು. ಇಲ್ಲವೇ ರೈತರ ಬೆಳೆಗಳಿಗೆ ಶಾಶ್ವತ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.