ADVERTISEMENT

ಮಧುಗಿರಿ | ನಿರ್ವಹಣೆ ಕೊರತೆ: ಸೊರಗಿದ ಉದ್ಯಾನ

ಮಧುಗಿರಿಯಲ್ಲಿ 74ಕ್ಕೂ ಹೆಚ್ಚು ಉದ್ಯಾನಗಳಿಗಾಗಿ ಜಾಗ ಮೀಸಲಿಟ್ಟು ವರ್ಷಗಳೇ ಉರುಳಿದರೂ ಅಭಿವೃದ್ಧಿ ಕಂಡಿಲ್ಲ

ಟಿ.ಪ್ರಸನ್ನಕುಮಾರ್
Published 9 ಡಿಸೆಂಬರ್ 2024, 7:09 IST
Last Updated 9 ಡಿಸೆಂಬರ್ 2024, 7:09 IST
ಮಧುಗಿರಿಯ 18ನೇ ವಾರ್ಡ್‌ನಲ್ಲಿನ ಪಾರ್ಕ್‌ನಲ್ಲಿ ಅನುಪಯುಕ್ತ ಗಿಡ
ಮಧುಗಿರಿಯ 18ನೇ ವಾರ್ಡ್‌ನಲ್ಲಿನ ಪಾರ್ಕ್‌ನಲ್ಲಿ ಅನುಪಯುಕ್ತ ಗಿಡ   

ಮಧುಗಿರಿ: ಪಟ್ಟಣದ ಉದ್ಯಾನಗಳು ಅಭಿವೃದ್ಧಿ, ನಿರ್ವಹಣೆ ಕೊರತೆಯಿಂದಾಗಿ ಹಂದಿ, ನಾಯಿಗಳ ಆವಾಸ ಕೇಂದ್ರಗಳಾಗಿ ಮಾರ್ಪಟ್ಟಿವೆ.

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಉದ್ಯಾನಗಳತ್ತ ಜನರು ಸುಳಿಯುತ್ತಿಲ್ಲ. ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನೆಮ್ಮದಿಯಾಗಿ ಕೆಲಕಾಲ ಕಳೆಯಲು, ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆಂದೆ ಅನೇಕರು ಉದ್ಯಾನಗಳಿಗೆ ಹೋಗುತ್ತಾರೆ. ಹಿರಿಯರಿಗೆ ವಿಶ್ರಾಂತಿಯ ತಾಣವಾದರೆ, ಕಿರಿಯರಿಗೆ ಆಟವಾಡಲು ನೆಚ್ಚಿನ ತಾಣವೂ ಹೌದು. ಆದರೆ ಪಟ್ಟಣದಲ್ಲಿ ಉದ್ಯಾನಗಳು ಪಾಳು ಬಿದ್ದಂತೆ ಕಾಣುತ್ತವೆ. ಜೋಕಾಲಿ, ಜಾರುಗುಂಡಿ ಸೇರಿದಂತೆ ಮಕ್ಕಳ ಆಟಿಕ ಸಾಮಗ್ರಿಗಳು ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ದಿನ ಕಳೆದಂತೆ ಹೊಸ ಹೊಸ ಲೇಔಟ್‌ಗಳು ನಿರ್ಮಾಣವಾಗುತ್ತಿದೆ. ಇಂತಹ ಲೇಔಟ್‌ಗಳಲ್ಲಿ ಪಾರ್ಕ್‌ಗಳಿಗೆಂದೇ ಜಾಗ ಮೀಸಲು ಇಡುತ್ತಿದ್ದಾರೆ. ಆದರೆ ಆ ಪಾರ್ಕ್‌ ಕೂಡ ಅಭಿವೃದ್ಧಿಯಾಗದೇ ಅನುಪಯುಕ್ತ ಗಿಡ ಬೆಳೆದು ವಿಷ ಜಂತುಗಳ ಆವಾಸ ತಾಣವಾಗಿವೆ.

ಕೆಲವೆಡೆ ಪಾರ್ಕ್‌ ಜಾಗಗಳು ಒತ್ತುವರಿಯಾಗಿ ಮನೆಗಳ ನಿರ್ಮಾಣವಾಗಿವೆ. ಆದಾಗ್ಯೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಟ್ಟಣ ನಿವಾಸಿಗಳು ದೂರುತ್ತಾರೆ.

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 74ಕ್ಕೂ ಹೆಚ್ಚು ಉದ್ಯಾನಗಳಿಗಾಗಿ ಜಾಗ ಮೀಸಲಿಟ್ಟು ಹಲವು ವರ್ಷಗಳೇ ಉರುಳಿವೆ. ಈವರೆಗೆ ಅಭಿವೃದ್ಧಿ ಕಂಡಿಲ್ಲ. ನಾಲ್ಕು ಪಾರ್ಕ್‌ಗಳನ್ನು ಮಾತ್ರ ಸ್ವಲ್ಪ ಅಭಿವೃದ್ಧಿ ಮಾಡಲಾಗಿದೆ. ಆದರೆ ಅಲ್ಲಿಯೂ ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ.

ಪಟ್ಟಣದ ಸುತ್ತ ಬೆಟ್ಟಗುಡ್ಡಗಳ ಸಾಲು ಇರುವುದರಿಂದ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗುತ್ತಾರೆ. ಈ ಹಿಂದೆ ಶಿರಾ ಗೇಟ್ ಬಳಿಯ ರಸ್ತೆ ಬದಿಯಲ್ಲಿದ್ದ ದೊಡ್ಡ ದೊಡ್ಡ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಡಿದಿರುವುದರಿಂದ ಜನರು ನೆರಳಿಗಾಗಿ ಹುಡುಕಾಡುವ ಸ್ಥಿತಿ ಇದೆ.

ಪುರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆಲ ಉದ್ಯಾನಗಳನ್ನು ಅಭಿವೃದ್ಧಿ ಮಾಡಿದೆ. ಆದರೆ ಸರಿಯಾಗಿ ಸಿಬ್ಬಂದಿಗಳನ್ನು ನೇಮಿಸದೆ ಹಾಗೂ ನಿರ್ವಹಣೆ ಇಲ್ಲದೆ ಎಮ್ಮೆ, ಹಸು ಹಾಗೂ ಹಂದಿಗಳು ಪ್ರವೇಶದಿಂದಾಗಿ ಉದ್ಯಾನದಲ್ಲಿದ್ದ ಗಿಡಗಳು ಸಂಪೂರ್ಣವಾಗಿ ಹಾಳಾಗಿದೆ. ಕೆಲವು ಪಾರ್ಕ್‌ಗಳು ಕುಡುಕರ ಅಡ್ಡೆಗಳಾಗಿವೆ. ಇದನ್ನು ಪ್ರಶ್ನಿಸಿದ ಅಕ್ಕ-ಪಕ್ಕದ ಮನೆವರ ಮೇಲೆ ಗಲಾಟೆಗೆ ಮುಂದಾಗುತ್ತಾರೆ ಎಂದು ನಿವಾಸಿಯೊಬ್ಬರು ದೂರಿದರು.

ಪಟ್ಟಣದ ಪ್ರಮುಖ ಉದ್ಯಾನಗಳಲ್ಲಿ ಸ್ವಚ್ಛತೆಯ ಕೊರತೆ ಕಾಣುತ್ತದೆ. ಮುರಿದು ಹೋದ ಮಕ್ಕಳ ಆಟಿಕೆ ಸಲಕರಣೆ, ಆಸನಗಳು, ಬೀದಿ ನಾಯಿ ಆವಾಸ ಸ್ಥಾನಗಳಾಗಿವೆ. ಕೆಲ ಉದ್ಯಾನಗಳಂತೂ ಕುಡುಕರ, ನಿರಾಶ್ರಿತರ ತಾಣಗಳಾಗಿ ಮಾರ್ಪಟ್ಟಿವೆ. ಪಟ್ಟಣದ ಪುರಸಭೆ ಮುಂಭಾಗ, ಖಾಸಗಿ ಬಸ್ ನಿಲ್ದಾಣ, ಎಪಿಎಂಸಿ ಹಿಂಭಾಗ ಲಿಂಗೇನಹಳ್ಳಿ ಸೇರಿದಂತೆ ಬಹುತೇಕ ಉದ್ಯಾನಗಳು ಅಭಿವೃದ್ಧಿ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಮಯ ಕಳೆಯುವುದಕ್ಕೆ ಉತ್ತಮ ಸ್ಥಳವೇ ಇಲ್ಲದಂತಾಗಿದೆ ಎಂದು ತಿಪ್ಪೇಸ್ವಾಮಿ ದೂರಿದರು.

18ನೇ ವಾರ್ಡ್‌ನ ಎಪಿಎಂಸಿ ಹಿಂಭಾಗದಲ್ಲಿರುವ ಪಾರ್ಕ್‌ನಲ್ಲಿ ಅನುಪಯುಕ್ತ ಗಿಡಗಳು ಬೆಳೆದಿದೆ. ಇಲ್ಲಿನ ಆಟೋಪಕರಣಗಳು ತುಕ್ಕು ಹಿಡಿದು ನೆಲಕ್ಕೆ ಉರುಳಿವೆ. ಸುತ್ತಲೂ ಗಿಡಗಳು ಆವರಿಸಿಕೊಂಡಿರುವುದರಿಂದ ಜನರು ಪಾರ್ಕ್ ಒಳಗೆ ಹೋಗಲು ಭಯಭೀತರಾಗಿದ್ದಾರೆ. ಈ ಪಾರ್ಕ್‌ನಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಳನ್ನು ತೆರವುಗೊಳಿಸಬೇಕು, ಪಾರ್ಕ್‌ನಲ್ಲಿ ಆಟೋಪಕರಣಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪುರಸಭೆ ಮುಂಭಾಗದ ಪಾರ್ಕ್ ಪಕ್ಕದಲ್ಲೇ ದೊಡ್ಡ ಚರಂಡಿ ಹಾದು ಹೋಗಿರುವುದರಿಂದ ದುರ್ವಾಸನೆ ಬೀರುತ್ತಿದೆ. ಪಾರ್ಕ್‌ನಲ್ಲಿ ಜನರು ಕುಳಿತುಕೊಳ್ಳಲು ಹಾಗೂ ಮಕ್ಕಳು ಆಟವಾಡುವುದಕ್ಕೂ ಕಷ್ಟವಾಗಿದೆ.

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನರಿಗೆ ನೆಮ್ಮದಿಯಿಂದ ಸಮಯ ಕಳೆಯಲು ಹಾಗೂ ಮಕ್ಕಳಿಗೆ ಆಟವಾಡಲು ಸುಂದರ ಸ್ಥಳವೇ ಇಲ್ಲದಂತಾಗಿದೆ. ಪುರಸಭೆ ಮುಂಭಾಗದ ಪಾರ್ಕ್‌ನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು. ಖಾಸಗಿ ಬಸ್ ನಿಲ್ದಾಣ, ಲಿಂಗೇನಹಳ್ಳಿಯಲ್ಲಿರುವ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಪುರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಧುಗಿರಿಯಲ್ಲಿ ವಾಯುವಿಹಾರಕ್ಕೆ ಸೂಕ್ತ ಪಾರ್ಕ್‌ಗಳು ಇಲ್ಲದೆ ವೃದ್ಧರು ಮಹಿಳೆಯರು ಹಾಗೂ ‌ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈಗಿರುವ ಪಾರ್ಕ್‌ಗಳನ್ನು ಸುಂದರವಾಗಿ ಅಭಿವೃದ್ಧಿ ಪಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಪಿ.ಕುಮಾರ್, ನಿವೃತ್ತ ಬ್ಯಾಂಕ್ ನೌಕರ ಮಧುಗಿರಿ
ಪುರಸಭೆ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿನ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಿದರೆ ಬೆಳಿಗ್ಗೆ ಮತ್ತು ಸಂಜೆ ಸಮಯ ಕಳೆಯಲು ಮಕ್ಕಳು ಆಟವಾಡಲು ಸಹಕಾರಿಯಾಗುತ್ತದೆ
ಎಂ.ಬಿ.ಶಿವಶಂಕರ್, ನಿವೃತ್ತ ಶಿಕ್ಷಕ
18ನೇ ವಾರ್ಡ್‌ನಲ್ಲಿನ ಪಾರ್ಕ್‌ನಲ್ಲಿ ಆಳೆತ್ತರ ಗಿಡ ಬೆಳೆದಿರುವುದರಿಂದ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಹಗಲಿನಲ್ಲೇ ಹಾವುಗಳು ರಸ್ತೆಗೆ ಬರುತ್ತಿವೆ. ಪಾರ್ಕ್‌ನಲ್ಲಿರುವ ಮಕ್ಕಳ ಆಟೋಪಕರಣ ವಾಕಿಂಗ್ ಪಾತ್‌ಗಳಲ್ಲಿ ಗಿಡ ಬೆಳೆದು ಸಂಪೂರ್ಣ ಹಾಳಾಗಿವೆ.
ಕೃಷ್ಣಮೂರ್ತಿ, ನಿವಾಸಿ
ಮಧುಗಿರಿಯ 18ನೇ ವಾರ್ಡ್‌ನ ನಿರ್ವಹಣೆ ಇಲ್ಲದ ಪಾರ್ಕ್‌ನಲ್ಲಿಯೇ ಮಕ್ಕಳ ಆಟ
ಲಿಂಗೇನಹಳ್ಳಿ ಪಾರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.