ಕುಣಿಗಲ್: ತಾಲ್ಲೂಕಿನಲ್ಲಿ ಗ್ರಾಹಕರಬ್ಯಾಂಕ್ ಖಾತೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ದೋಚುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಹಕರ ಹಿತ ಕಾಪಾಡಲು ಬ್ಯಾಂಕ್ ವಿಫಲವಾಗಿದೆ. ಮತ್ತೊಂದೆಡೆ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರೂ ವಿಫಲರಾಗಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ.
ನಿತ್ಯವೂ ಐದರಿಂದ ಹತ್ತು ಪ್ರಕರಣ ವರದಿಯಾಗುತ್ತಿವೆ. ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಂದ ದೂರು ಪಡೆದು ವಿಮಾ ಕಂಪನಿಯಿಂದ ಹಣ ಕೊಡಿಸುವ ಭರವಸೆ ನೀಡುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಎದುರಿನ ಕೆನರಾ ಬ್ಯಾಂಕ್ ಎಟಿಎಂ ಬಳಕೆ ಮಾಡಿದ ಗ್ರಾಹಕರ ಖಾತೆಗೆ ಕನ್ನ ಹಾಕಿರುವುದು ಖಚಿತವಾಗಿದೆ. ಈ ಎಟಿಎಂ ಕೇಂದ್ರದಲ್ಲಿ ಯಾವುದೇ ಕಾವಲುಗಾರನನ್ನು ನೇಮಿಸಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಯಾಗಿದ್ದರೂ ಅಪರಾಧಿಗಳನ್ನು ಪತ್ತೆಹಚ್ಚಿಲ್ಲ ಎನ್ನುವುದು ಗ್ರಾಹಕರ ದೂರು.
‘ಕಳೆದ ವಾರ ಗ್ರಾಹಕರೊಬ್ಬರು ಬಂದು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಟಿಎಂ ಯಂತ್ರಕ್ಕೆ ಅಳವಡಿಸಿದ್ದ ಸ್ಕ್ಯಾನರ್ ಮತ್ತು ಚಿಕ್ಕ ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದರು. ನಂತರ ಆರೋಪಿಯನ್ನು ಹಿಡಿಯಲು ಮತ್ತೆ ಅಳವಡಿಕೆ ಮಾಡಿದರು. ಎಲ್.ಎಚ್.ಎಂ.ಎಸ್ ವ್ಯವಸ್ಥೆ ಅಳವಡಿಸಿ ಆರೋಪಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಎಟಿಎಂ ಕೇಂದ್ರಕ್ಕೆ ಬಂದ ಆರೋಪಿ ಹತ್ತು ಸೆಕೆಂಡ್‌ನಲ್ಲಿ ಸ್ಕ್ಯಾನರ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಹಂತದಲ್ಲಿ ಸ್ಪಷ್ಟ ಮಾಹಿತಿ ಮತ್ತು ಸೂಚನೆ ಬಂದಿದ್ದರೂ ನಿಯೋಜಿತ ಪೊಲೀಸ್ ಸಿಬ್ಬಂದಿಯ ನಿರ್ಲಕ್ಷದಿಂದ ಆರೋಪಿ ಪರಾರಿಯಾಗಿದ್ದಾನೆ’ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕಳೆದ ವಾರ ಕೆನರಾ ಬ್ಯಾಂಕ್ ಎಟಿಎಂನಲ್ಲಿ ವ್ಯವಹರಿಸಿದ್ದೆ. ಸೋಮ ವಾರ ರಾತ್ರಿ ನನ್ನ ಖಾತೆಯಿಂದ ₹ 25 ಸಾವಿರ ಡ್ರಾ ಮಾಡಲಾಗಿದೆ. ರಾತ್ರಿ ಮೊಬೈಲ್‌ಗೆ ಬಂದ ಸಂದೇಶ ನೋಡಿ ಗಾಬರಿಗೊಂಡು ಖಾತೆಯಲ್ಲಿದ್ದ ಉಳಿದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡೆ. ಬೆಳಿಗ್ಗೆ ದೂರು ನೀಡಿದೆ’ ಎಂದರು ಫೆಡರಲ್ ಬ್ಯಾಂಕ್ ಖಾತೆದಾರರಾದ ಯಶೋದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.