ತುಮಕೂರಿನಲ್ಲಿ ಭಾನುವಾರ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಗೋವಿಂದರಾಜು ಎಂ.ಕಲ್ಲೂರು, ಪಿ.ಚಂದ್ರಿಕಾ, ತಾಹೇರಾ ಕುಲ್ಸುಮ್, ಜಯರಾಮಯ್ಯ ದುಗ್ಗೇನಹಳ್ಳಿ ಅವರಿಗೆ ವೀಚಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗಕರ್ಮಿ ಬೇಲೂರು ರಘುನಂದನ
ತುಮಕೂರು: ಈಗಾಗಲೇ ಆಕ್ರಮಿಸಿಕೊಂಡ ಸಾವಿರಾರು ಎಕರೆ ಭೂಮಿ ಪಾಳು ಬಿದ್ದರೂ ಸರ್ಕಾರಕ್ಕೆ ಭೂದಾಹ ತಗ್ಗಿಲ್ಲ. ಇದು ಪ್ರಗತಿಯಲ್ಲ, ಜನದ್ರೋಹಿ ಕೃತ್ಯ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರ ಅನ್ನ ಕೊಡುವ ಭೂಮಿಯನ್ನು ಕಸಿದುಕೊಳ್ಳುತ್ತಿರುವುದು ಖಂಡನೀಯ. ದೇವನಹಳ್ಳಿ ಸುತ್ತಮುತ್ತಲಿನ ಸಾವಿರಾರು ಎಕರೆ ಜಮೀನು ಆಕ್ರಮಿಸಿಕೊಳ್ಳಲು ಹೊರಟಿರುವ ಭೂದಾಹಿಗಳ ವಿರುದ್ಧ ಧ್ವನಿ ಎತ್ತಬೇಕು. ಇಲ್ಲದಿದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಎಂದರು.
ರಾಜಕಾರಣಿಗಳು ಕೆಟ್ಟರೆ ಕಲಾವಿದರು, ಸಾಹಿತಿಗಳು ಅವರನ್ನು ಸರಿದಾರಿಗೆ ತರುವ ಕಾರ್ಯ ಮಾಡಬೇಕು. ಹಿಂದಿನಿಂದಲೂ ಇದೇ ರೀತಿ ಮಾಡುತ್ತಾ ಬರಲಾಗಿದೆ. ಈಗಿನ ಸಂದರ್ಭದಲ್ಲಿ ರಾಜಕಾರಣಕ್ಕಿಂತ ಹೆಚ್ಚು ಸಾಂಸ್ಕೃತಿಕ ಕ್ಷೇತ್ರಕ್ಕೆ ದುಷ್ಟ ಕಾಲ ಬಂದೊದಗಿದೆ. ಮಾತನಾಡುವರು ಇಲ್ಲವಾಗಿದ್ದು, ಕೆಲವರು ಜಾಣ ಮೌನ ವಹಿಸಿದ್ದಾರೆ. ನುಡಿಗೆ ಆಪತ್ತು ಬಂದಾಗ ಎಲ್ಲರೂ ದಿಟ್ಟವಾಗಿ, ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದರು.
ವೀಚಿ ಇಂತಹ ಜನ ವಿರೋಧಿ ಕೃತ್ಯಗಳ ವಿರುದ್ಧ ಧ್ವನಿ ಎತ್ತಿದ್ದರು. ಬದುಕಿನಲ್ಲಿ ಕಾವ್ಯ, ಕೃಷಿಯನ್ನು ಅಳವಡಿಸಿಕೊಂಡಿದ್ದರು. ಎರಡನ್ನೂ ಅವಿನಾಭಾವ ರೀತಿಯಲ್ಲಿ ತೆಗೆದುಕೊಂಡು ಹೋಗಿದ್ದರು. ಅವರ ಕೃತಿಗಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರದ ಕುರಿತು ಬೆಳಲು ಚೆಲ್ಲಿದ್ದರು. ಕಾವ್ಯದ ಮೂಲಕ ಲೋಕ ದರ್ಶನ ಕಟ್ಟಿಕೊಟ್ಟಿದ್ದರು ಎಂದು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ವೀಚಿ ಸಮಗ್ರ ಸಾಹಿತ್ಯ ಕುರಿತು ಚರ್ಚೆಯಾಗಬೇಕು. ‘ವೀಚಿ ಸಮಗ್ರ ಕಾವ್ಯ’ ಪ್ರಕಟಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮನವಿ ಮಾಡಬೇಕು. ಪ್ರಾಧಿಕಾರ ಸರ್ಕಾರಿ ಸಂಸ್ಥೆಯಾಗಿದ್ದು, ಕೃತಿಗೆ ಅಧಿಕೃತತೆ ಸಿಗುತ್ತದೆ. ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು.
ಲೇಖಕ ಬಸವರಾಜ ಸಾದರ, ‘ಇವತ್ತಿನ ಪ್ರಶಸ್ತಿಗಳು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಸರ್ಕಾರ, ಖಾಸಗಿ ಸಂಸ್ಥೆ ಎಂದು ವಿಭಜನೆಯಾಗಿವೆ. ಹಿರಿಯ ಸಾಹಿತಿಗಳ ನೆನಪಿನಲ್ಲಿ ಕೊಡುವುದು ನಿಜವಾದ ಪ್ರಶಸ್ತಿ. ಇಂತಹ ಪ್ರಶಸ್ತಿ ನಿಜಕ್ಕೂ ಮೌಲಿಕ, ಗುಣಾತ್ಮಕವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.
ಲೇಖಕ ತುಂಬಾಡಿ ರಾಮಯ್ಯ, ರಂಗಕರ್ಮಿ ಬೇಲೂರು ರಘುನಂದನ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ, ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್.ನಾಗಣ್ಣ, ಪ್ರತಿಷ್ಠಾನದ ಎಂ.ಎಚ್.ನಾಗರಾಜು, ಮರಿಯಂಬೀ ಇತರರು ಹಾಜರಿದ್ದರು.
Cut-off box - ವೀಚಿ ಸರಳ ಮನುಷ್ಯ ವೀಚಿ ಸರಳ ಸಜ್ಜನ ಮನುಷ್ಯ. ಸಾಮಾಜಿಕ ಕಳವಳಿ ಹೊಂದಿದ್ದರು. ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಪುಸ್ತಕ ಓದುವ ಪ್ರವೃತ್ತಿ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯದ ಇತಿಹಾಸ ಆಳ-ಅಗಲ ಅರಿತುಕೊಳ್ಳಲು ಅನುಕೂಲವಾಗುತ್ತದೆ. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಹಳ್ಳಿಗಾಡಿನ ಸಾಹಿತಿಗಳಿಗೆ ಆದ್ಯತೆ ನೀಡಬೇಕು. ಅವರನ್ನು ಗುರುತಿಸಬೇಕು. ಹೊಸ ಪೀಳಿಗೆಗೆ ಸಾಹಿತ್ಯ ಪರಂಪರೆ ಪರಿಚಯಿಸಬೇಕು ಎಂದು ಸಲಹೆ ಮಾಡಿದರು.
ಪ್ರಶಸ್ತಿ ಪಡೆದವರು
ಬೆಂಗಳೂರಿನ ಪಿ.ಚಂದ್ರಿಕಾ ಅವರಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ’ ಸಹಾಯಕ ಪ್ರಾಧ್ಯಾಪಕ ಗೋವಿಂದರಾಜು ಎಂ.ಕಲ್ಲೂರು ಅವರಿಗೆ ‘ವೀಚಿ ಯುವ ಸಾಹಿತ್ಯ’ ತತ್ವಪದ ಗಾಯಕ ಜಯರಾಮಯ್ಯ ದುಗ್ಗೇನಹಳ್ಳಿ ಅವರಿಗೆ ‘ವೀಚಿ ಜನಪದ ಸಾಹಿತ್ಯ’ ಸಾಮಾಜಿಕ ಕಾರ್ಯಕರ್ತೆ ತಾಹೇರಾ ಕುಲ್ಸುಮ್ ಅವರಿಗೆ ‘ವೀಚಿ ಕನಕ ಕಾಯಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.