ADVERTISEMENT

ಜಮೀನಿನ ಬಾಡಿಗೆ ದರ ಪರಿಷ್ಕರಣೆ

ತಿರುಮಣಿ ಸೋಲಾರ್‌ ಪಾರ್ಕ್‌ಗೆ ಸಚಿವ ವಿ. ಸುನಿಲ್‌ ಕುಮಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 4:44 IST
Last Updated 30 ಸೆಪ್ಟೆಂಬರ್ 2021, 4:44 IST
ಪಾವಗಡ ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್‌ ಪಾರ್ಕ್‌ಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಪಿ. ಬುಡೆಪ್ಪ, ಶ್ರೀನಿವಾಸ್‌ ಹಾಜರಿದ್ದರು
ಪಾವಗಡ ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್‌ ಪಾರ್ಕ್‌ಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಪಿ. ಬುಡೆಪ್ಪ, ಶ್ರೀನಿವಾಸ್‌ ಹಾಜರಿದ್ದರು   

ಪಾವಗಡ: ‘ಸೋಲಾರ್‌ ಪಾರ್ಕ್‌ಗೆ ನೀಡಿರುವ ರೈತರ ಜಮೀನಿನ ಬಾಡಿಗೆ ದರವನ್ನು ಶೀಘ್ರವೇ ಪರಿಷ್ಕರಿಸಲಾಗುವುದು’ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್‌ ಪಾರ್ಕ್‌ಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಸೋಲಾರ್‌ ಪಾರ್ಕ್‌ ನಿರ್ಮಿಸುವ ವೇಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ ಮಾತಿಗೆ ಬದ್ಧ. ಅವರು ನೀಡಿದ ಭರವಸೆಗಳನ್ನು ಅನುಷ್ಠಾನ ಮಾಡಲಾಗುವುದು. ಐಟಿಐ, ಡಿಪ್ಲೊಮಾ ಶಿಕ್ಷಣ ಪಡೆದಿರುವ ಸ್ಥಳೀಯ ಯುವಕರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಲು ಸೂಚನೆ ನೀಡಲಾಗುವುದು. ರೈತರ ಜಮೀನಿಗೆ
₹ 21 ಸಾವಿರ ಬಾಡಿಗೆ ನೀಡುತ್ತಿದ್ದು, ಶೀಘ್ರ ಹೆಚ್ಚಿಸಲಾಗುವುದು’ ಎಂದರು.

ADVERTISEMENT

‘ಸ್ಥಳೀಯರಿಗೆ ಕಾಮಗಾರಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ. ಈ ಪ್ರದೇಶದಲ್ಲಿ ಅಗತ್ಯವಿರುವ ಶಾಲಾ, ಕಾಲೇಜು ಆರಂಭಿಸಲಾಗುವುದು. ಈಗಾಗಲೇ ಗ್ರಾಮಗಳ ಅಭಿವೃದ್ಧಿಗೆ ₹ 67 ಕೋಟಿ ಮೀಸಲಿಡಲಾಗಿದೆ. ಅದನ್ನು ರಸ್ತೆ, ಶಿಕ್ಷಣ, ಕುಡಿಯುವ ನೀರು ಇತ್ಯಾದಿ ಅಗತ್ಯ ಸೌಕರ್ಯಗಳಿಗೆ ಬಳಸಲಾಗುವುದು. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ ಆರ್)‌ಯಲ್ಲಿ ಶಿಕ್ಷಕರು, ವೈದ್ಯರನ್ನು ನೇಮಿಸಲು ನಿರ್ದೇಶನ ನೀಡಲಾಗುವುದು’ ಎಂದು ತಿಳಿಸಿದರು.

ಗ್ರಾಮಗಳ ರಸ್ತೆಗಳಲ್ಲಿ ಬೀದಿದೀಪ ಅಳವಡಿಸಲು, ಅಗ್ನಿಶಾಮಕ ಠಾಣೆ ಆರಂಭಿಸುವ ಬಗ್ಗೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗುವುದು. ಶಾಸಕ ವೆಂಕಟರವಣಪ್ಪ 2 ಸಾವಿರ ಎಕರೆ ಜಮೀನು ನೀಡಲು ರೈತರು ಸಿದ್ಧರಾಗಿದ್ದಾರೆ ಎಂದಿದ್ದಾರೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ಮನವಿ: ಪಾರ್ಕ್‌ ಕಾಮಗಾರಿ, ನಿರ್ವಹಣೆ ಕೆಲಸವನ್ನು ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯದವರಿಗೆ ಕೊಡಲಾಗುತ್ತಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸೋಲಾರ್‌ ಬೀದಿದೀಪ ಅಳವಡಿಸಬೇಕು. ಅರಣ್ಯೀಕರಣ ಮಾಡಬೇಕು. ಅಂತರ್ಜಲ ಸಂರಕ್ಷಿಸಲು ಕಾಮಗಾರಿ ನಡೆಸಬೇಕು. ಉತ್ತಮ ಶಾಲೆ, ಕಾಲೇಜುಗಳನ್ನು ಈ ಭಾಗದಲ್ಲಿ ನಿರ್ಮಿಸಬೇಕು. ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಕೆಲಸ ನೀಡಬೇಕು ಎಂದು ರೈತರಾದ ಅಕ್ಕಲಪ್ಪ, ಕೋನಪ್ಪ, ಮಾರುತಿ, ಸುನಿಲ್ ಕುಮಾರ್ ಸಚಿವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಪಿ. ಬುಡೆಪ್ಪ, ಶ್ರೀನಿವಾಸ್‌, ಕಾರ್ಯ ನಿರ್ವಾಹಕ ಎಂಜಿನಿಯರ್‌ ಗೋವಿಂದಪ್ಪ, ಆದಿನಾರಾಯಣ, ತಹಶೀಲ್ದಾರ್‌ ಕೆ.ಆರ್. ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.