ತುಮಕೂರು: ಉಪನ್ಯಾಸಕರ ಬಾಕಿ ವೇತನ ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹರೀಶ್ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಜಿಲ್ಲಾ ಮಟ್ಟದ ಸಭೆಯ ನಂತರದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅ.3 ರಂದು ಹೊರಡಿಸಿರುವ ಸುತ್ತೋಲೆ ಉಪನ್ಯಾಸಕರಿಗೆ ನುಂಗಲಾರದ ತುತ್ತಾಗಿದೆ. ಕಾರ್ಯಭಾರವಿಲ್ಲದ ಉಪನ್ಯಾಸಕರನ್ನು ಹತ್ತಿರದ ಅನುದಾನಿತ ಕಾಲೇಜಿಗೆ ನಿಯೋಜಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಇದರಲ್ಲಿ ಹಲವು ನ್ಯೂನತೆಯಿದ್ದು, ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಸುಮಾರು 6 ಸಾವಿರ ಜನ ಸುತ್ತೋಲೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಉಪನ್ಯಾಸಕರ ವೇತನ ಮತ್ತು ಭತ್ಯೆ ತಡೆಹಿಡಿಯಲಾಗಿದೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು. ಉಪನ್ಯಾಸಕರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜಿಸಲು ಇರುವ ನಿರ್ಬಂಧ ರದ್ದುಪಡಿಸಬೇಕು ಎಂದರು.
ಅನುದಾನಿತ ಕಾಲೇಜುಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಸೌಲಭ್ಯ ವಿಸ್ತರಿಸಬೇಕು. ವಾಣಿಜ್ಯ ವಿಷಯದ ಉಪನ್ಯಾಸಕರಿಗೆ ಬಿ.ಇಡಿ ನಿಗದಿ ಕೈಬಿಡಬೇಕು. ಅಂತರ್ ಜಿಲ್ಲೆ ನಿಯೋಜನೆ ರದ್ದುಗೊಳಿಸುವುದು ಒಳಗೊಂಡತೆ ಹಲವು ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀಕಂಠಯ್ಯ, ತಿಪ್ಪೇಸ್ವಾಮಿ, ಆನಂದ್, ಕುಮಾರಯ್ಯ, ಗೋವಿಂದರಾಜು, ಬಿ.ಆರ್.ಮಂಜುನಾಥ್, ಗೋವಿಂದರಾಜು, ಪುಟ್ಟಸ್ವಾಮಿ, ಉಷಾ ಪಟೇಲ್, ಕೃಷ್ಣಮೂರ್ತಿ, ದೇವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.