
ಚಿಕ್ಕನಾಯಕನಹಳ್ಳಿ: ದತ್ತು ಮಾಸಾಚರಣೆ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ದತ್ತು ಪಡೆಯುವ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಹಶೀಲ್ದಾರ್ ಕಚೇರಿಯಿಂದ ಸರ್ಕಾರಿ ಬಸ್ ನಿಲ್ದಾಣದವರೆಗೆ ಜಾಥಾ ನಡೆಯಿತು.
ಪಟ್ಟಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲ್ಲೂಕು ಆಡಳಿತದಿಂದ ನಡೆದ ಜಾಗೃತಿ ಜಾಥಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ದತ್ತು ಪ್ರಕ್ರಿಯೆಯ ಮಹತ್ವ, ಕಾನೂನುಬದ್ಧವಾಗಿ ಮಕ್ಕಳನ್ನು ದತ್ತು ಪಡೆಯುವುದರಿಂದಾಗುವ ಪ್ರಯೋಜನ ಮತ್ತು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಮಾರ್ಗಸೂಚಿಗಳ ಕುರಿತು ಘೋಷಣೆ ಕೂಗಿದರು. ಅನಧಿಕೃತ ಮತ್ತು ಕಾನೂನುಬಾಹಿರ ದತ್ತು ಪ್ರಕ್ರಿಯೆಗಳ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಯಿತು.
ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವುದು ಆ ಮಕ್ಕಳು ಮುಂದೆ ನಮಗೆ ಆಸರೆಯಾಗುವಂತೆ ಬೆಳೆಸುವುದು ಮಕ್ಕಳ ಪೋಷಣೆ ಒಳ್ಳೆಯ ವಿಚಾರ. ಅದು ಕಾನೂನಾತ್ಮಕವಾಗಿರಬೇಕು. ಅದರಿಂದ, ಮಗುವಿಗೂ ಪೋಷಕರಿಗೂ ಒಳ್ಳೆಯದು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯಬೇಡಿ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಪುರಂದರ ಕೆ, ಇ.ಒ. ದೊಡ್ಡಸಿದ್ದಯ್ಯ, ಸಿಡಿಪಿಒ ಹೊನ್ನಪ್ಪ, ಸಂತೋಷ್, ರೇಖಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.