ADVERTISEMENT

ಸಂತ್ರಸ್ತರಿಗೆ ಪ್ರಾಧಿಕಾರದ ‘ನೆರವಿನ ಹಸ್ತ’: 6 ವರ್ಷದಲ್ಲಿ 2.80 ಕೋಟಿ ವಿತರಣೆ

ಪ್ರಜಾವಾಣಿ ವಿಶೇಷ
Published 10 ಫೆಬ್ರುವರಿ 2026, 5:22 IST
Last Updated 10 ಫೆಬ್ರುವರಿ 2026, 5:22 IST
ತುಮಕೂರು ಜಿಲ್ಲಾ ನ್ಯಾಯಾಲಯ ಕಟ್ಟಡ
ತುಮಕೂರು ಜಿಲ್ಲಾ ನ್ಯಾಯಾಲಯ ಕಟ್ಟಡ   

ತುಮಕೂರು: ಪೋಕ್ಸೊ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಇತರೆ ಪ್ರಕರಣಗಳ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯ ಹಸ್ತ ಚಾಚುತ್ತಿದ್ದು, ಅಸಹಾಯಕರ ಬದುಕಿಗೆ ಊರುಗೋಲಾಗಿದೆ. ಕಳೆದ 6 ವರ್ಷದಲ್ಲಿ 106 ಸಂತ್ರಸ್ತರಿಗೆ ₹2.80 ಕೋಟಿ ಪರಿಹಾರ ವಿತರಿಸಿದೆ.

ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ತೀರ್ಪು ಹೊರ ಬಂದ ನಂತರ, ಕೋರ್ಟ್‌ ಆದೇಶದಂತೆ ಸಂತ್ರಸ್ತರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. 2020–2025ರ ಅವಧಿಯ ಪೋಕ್ಸೊ ಪ್ರಕರಣದಲ್ಲಿ 54 ಬಾಲಕಿಯರಿಗೆ ₹1.83 ಕೋಟಿ ಪರಿಹಾರ ತಲುಪಿಸಲಾಗಿದೆ. 2025ರಲ್ಲಿ 13 ಮಂದಿಗೆ ₹64.50 ಲಕ್ಷ ನೀಡಲಾಗಿದೆ.

2024ರಲ್ಲಿ 28 ಮಂದಿಗೆ ₹40.50 ಲಕ್ಷ ಪರಿಹಾರ ಸಿಕ್ಕಿತ್ತು. 2025ರಲ್ಲಿ 23 ಜನಕ್ಕೆ ₹87 ಲಕ್ಷ ದೊರೆತಿದೆ. ಆರ್ಥಿಕವಾಗಿ ದುರ್ಬಲರಾಗಿ ಇರುವವರಿಗೆ ಪ್ರಾಧಿಕಾರದಿಂದ ಕಾನೂನು ನೆರವು ಸಹ ನೀಡಲಾಗುತ್ತಿದೆ. ಉಚಿತವಾಗಿ ವಕೀಲರ ಸೇವೆ ಒದಗಿಸಲಾಗುತ್ತಿದೆ. ಅಗತ್ಯ ಮಾರ್ಗದರ್ಶನ ಮಾಡಲಾಗುತ್ತಿದೆ. ವಕೀಲರನ್ನು ನೇಮಿಸಿ, ಪ್ರಕರಣ ಮುಂದುವರಿಸಲು ದಾರಿ ತೋರಿಸಲಾಗಿದೆ.

ADVERTISEMENT

ವಕೀಲರ ನೇಮಕ: 2022ರ ಜುಲೈನಿಂದ 2025ರ ವರೆಗೆ ವಿವಿಧ ಪ್ರಕರಣಗಳಿಗೆ 980 ಮಂದಿ ವಕೀಲರನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿಯೋಜಿಸಲಾಗಿದೆ. ಇಷ್ಟು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಉಚಿತವಾಗಿ ಕಾನೂನು ನೆರವು ಕಲ್ಪಿಸಲಾಗಿದೆ. ತುಳಿತಕ್ಕೆ ಒಳಗಾದವರ ಪರವಾಗಿ ಪ್ರಾಧಿಕಾರ ಮುಂದಡಿ ಇಡುತ್ತಿದೆ.

ಕಾನೂನು ನೆರವಿಗಾಗಿ ಪ್ರಾಧಿಕಾರದ ಬಾಗಿಲು ತಟ್ಟುವವರ ಸಂಖ್ಯೆಯೂ ದಿನೇ ದಿನೇ ಜಾಸ್ತಿಯಾಗುತ್ತಿದೆ. ವಕೀಲರನ್ನು ನೇಮಿಸುವುದರ ಜತೆಗೆ ಸಂತ್ರಸ್ತರ ಬದುಕು ಸುಧಾರಣೆಯ ಉದ್ದೇಶದಿಂದ ಪರಿಹಾರವನ್ನೂ ನೀಡುತ್ತಿದೆ. ನೊಂದವರ ಕಣ್ಣೀರು ಒರೆಸುವ ಕಾಯಕದಲ್ಲಿ ತೊಡಗಿದೆ. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಮಯದಲ್ಲೂ ಸಂತ್ರಸ್ತರ ಜೀವನಕ್ಕೆ ಬೇಕಾದ ಅಗತ್ಯ ಸೌಲಭ್ಯ ಒದಗಿಸುತ್ತಿದೆ. ಬಡವರು, ನಿರ್ಗತಿಕರು ಗೌರವಯುತ ಬದುಕು ಸಾಗಿಸಲು ಶ್ರಮಿಸುತ್ತಿದೆ.

ಪ್ರಾಧಿಕಾರದಿಂದ ಜನರ ಮನೆ ಬಾಗಿಲಿಗೆ ಹೋಗಿ ಕಾನೂನು ಕುರಿತು ಅರಿವು ಮೂಡಿಸಲಾಗುತ್ತಿದೆ. ಗೊಲ್ಲರ ಹಟ್ಟಿಗಳಿಗೆ ತೆರಳಿ ಅಲ್ಲಿನ ಮೌಢ್ಯತೆ, ಕಂದಾಚಾರದ ಕುರಿತು ಎಚ್ಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರನ್ನು ಮೌಢ್ಯ ಆಚರಣೆಗಳಿಂದ ಹೊರ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದಾಗಿ ಹಟ್ಟಿಗಳಲ್ಲಿ ಸಾಕಷ್ಟು ಸುಧಾರಣೆಗಳು ಆಗುತ್ತಿವೆ.

ನೂರುನ್ನೀಸಾ

ಜನರ ಬಳಿಗೆ ತೆರಳಿ ಜಾಗೃತಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ. ರೈಲು ನಿಲ್ದಾಣ ಬಸ್‌ ನಿಲ್ದಾಣ ಚಿತ್ರಮಂದಿರಗಳಲ್ಲಿ ಪ್ರಾಧಿಕಾರದಿಂದ ಸಿಗುವ ಸೌಲಭ್ಯ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ನ್ಯಾಯಾಧೀಶರು ಜನರ ಬಳಿಗೆ ತೆರಳುತ್ತಿದ್ದಾರೆ. ಸಿನಿಮಾ ವಿರಾಮದ ಸಮಯದಲ್ಲಿ ಪ್ರೇಕ್ಷಕರಿಗೆ ಕಾನೂನು ಸೇವೆಗಳ ಬಗ್ಗೆ ತಿಳಿಸಲಾಗುತ್ತಿದೆ. ರೈಲು ನಿಲ್ದಾಣಗಳಲ್ಲಿಯೂ ಕರಪತ್ರ ಹಂಚುವ ಮೂಲಕ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಭಿನ್ನ ಆಲೋಚನೆ ಕಾರ್ಯಗಳ ಮುಖಾಂತರ ಜನರಿಗೆ ಪ್ರಾಧಿಕಾರ ಜನರ ಮನ ತಲುಪುತ್ತಿದೆ.

ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ನೆರವು ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನ್ಯಾಯಾಲಯದ ಸೂಚನೆಯಂತೆ ಸಂತ್ರಸ್ತರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗುತ್ತಿದೆ. ಮತ್ತೆ ಅವರು ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತಿದೆ.
-ನೂರುನ್ನೀಸಾ, ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.