ADVERTISEMENT

ತುಮಕೂರು: ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದು ಕೊಂದ ಚಿರತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 2:08 IST
Last Updated 1 ಮಾರ್ಚ್ 2020, 2:08 IST
ಚಂದನಾ
ಚಂದನಾ   

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಬೈಚೇನಹಳ್ಳಿ ಗ್ರಾಮದಲ್ಲಿ ನರಭಕ್ಷಕ ಚಿರತೆ ಚಂದನಾ (3) ಎಂಬ ಹೆಣ್ಣು ಮಗುವನ್ನು ಕೊಂದು ಹಾಕಿದೆ.

ಚಂದನಾ, ಕಣಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗಳು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಚಿರತೆ ದಾಳಿ ಮಾಡಿ, ಮಗುವನ್ನು ಎತ್ತಿಕೊಂಡು ಹೋಗಿದೆ.

ಮಗು ಮನೆ ಅಂಗಳದಲ್ಲಿ ಇಲ್ಲದಿರುವುದನ್ನು ನೋಡಿದ ನಂತರ ಚಿರತೆ ದಾಳಿ ಮಾಡಿರುವುದು ಗೊತ್ತಾಗಿದೆ. ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಮಗುವಿನ ಶವ ದೊರಕಿದೆ. ಹೆಬ್ಬೂರು ಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂವರ ಮೇಲೆ ಚಿರತೆ ದಾಳಿ ನಡೆಸಿದೆ. ಈ ಭಾಗದಲ್ಲಿ ಪದೇ ಪದೇ ಚಿರತೆ ದಾಳಿ ನಡೆಯುತ್ತಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪೊಲೀಸರಿಂದ ಬಿಗಿ ಬಂದೋಬಸ್ತ್

ಚಿರತೆ ದಾಳಿ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಚಿರತೆ ದಾಳಿ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರು ಒಗ್ಗೂಡದಂತೆ ಚದುರಿಸಿದ್ದಾರೆ. ರಾತ್ರಿ 9ರಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಸ್ಥಳೀಯ ಮುಖಂಡರಿಗೆ ಕರೆಮಾಡಿ ಪ್ರತಿಭಟನೆ ನಡೆಸದಂತೆ ಮನವೊಲಿಸುತ್ತಿದ್ದಾರೆ.

ಪದೇ ಪದೇ ದಾಳಿ: ಹೆಬ್ಬೂರು ಭಾಗದಲ್ಲಿ ಚಿರತೆ ಪದೇ ಪದೇ ಜನರನ್ನಲ್ಲದೇ ದನ, ಕುರಿಗಳ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಈ ಭಾಗದ ಜನರು ಆತಂಕಕ್ಕೀಡಾಗಿದ್ದಾರೆ. ಕೆಲವರು ತಾಳ್ಮೆ ಕಳೆದುಕೊಂಡು ಈ ಹಿಂದೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಪುನಃ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತಾ ಕ್ರಮವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.