ADVERTISEMENT

ತುರುವೇಕೆರೆ: ಚಿರತೆ ಸಿಕ್ಕರೂ ದೂರಾಗದ ಆತಂಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:08 IST
Last Updated 23 ಡಿಸೆಂಬರ್ 2025, 7:08 IST

ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಮಹಿಳೆ ಚಿರತೆ ದಾಳಿಯಿಂದ ಸಾವನ್ನಪ್ಪಿದ ಕುಟಂಬಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಶಾಸಕ ಎಂ.ಟಿ.ಕೃಷ್ಣಪ್ಪ ಪರಿಹಾರದ ಚೆಕ್ ವಿತರಿಸಿದರು

ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಮಹಿಳೆ ಚಿರತೆ ದಾಳಿಯಿಂದ ಸಾವನ್ನಪ್ಪಿದ ಕುಟಂಬಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮತ್ತು ಶಾಸಕ ಎಂ.ಟಿ.ಕೃಷ್ಣಪ್ಪ ಪರಿಹಾರದ ಚೆಕ್ ವಿತರಿಸಿದರು

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಹೊರವಲಯದಲ್ಲಿ ದನಕರುಗಳನ್ನು ಕರೆತರಲು ಹೋಗಿದ್ದ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಮಹಿಳೆಯನ್ನು ಕೊಂದ ಘಟನೆಯಿಂದ ಗ್ರಾಮದಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.

ADVERTISEMENT

ಈಚೆಗೆ ಗೋಣಿತುಮಕೂರಿನಲ್ಲಿ ಮೂರ್ನಾಲ್ಕು ಮಂದಿಗೆ ಚಿರತೆ ಗಾಯಗೊಳಿಸಿದ್ದು ಬಿಟ್ಟರೆ ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಚಿರತೆಯಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ತಾಲ್ಲೂಕಿನಾದ್ಯಂತ ಸಂಚಲನ ಮೂಡಿಸಿದೆ.

ಅರೇಮಹಲ್ಲೇನ ಹಳ್ಳಿ ಆಸುಪಾಸಿನ ಗ್ರಾಮಗಳಲ್ಲಿನ ಜನರು ತಮ್ಮ ತೋಟಗಳಿಗೆ ತೆರಳಲು ಮತ್ತು ಮನೆಯಿಂದ ಹೊರ ಹೋಗಲು ಹಿಂಜರಿಯುತ್ತಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ತುರುವೇಕೆರೆ ಪೊಲೀಸರು ಘಟನೆ ನಡೆದ ಗ್ರಾಮದಲ್ಲಿ ತಳವೂರಿದ್ದಾರೆ.

ಅರೇಮಲ್ಲೇನಹಳ್ಳಿ ಮತ್ತು ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಕಂಡ ತಕ್ಷಣ ಏನು ಮಾಡಬೇಕು ಮತ್ತು ಏನು ಮಾಡಬಾರದು, ಚಿರತೆ ಸೆರೆ ಹಿಡಿಯಲು ಸಾರ್ವಜನಿಕರು ಸಹಕರಿಸಬೇಕು, ಮುಂಜಾನೆ ಮತ್ತು ಸಂಜೆ ನಂತರ ತೋಟ, ಹೊಲ, ಗದ್ದೆಗಳಿಗೆ ಹೋಗುವುದು ಮತ್ತು ಚಿರತೆ ಹಿಡಿಯುವ ತನಕ ದನಕರುಗಳನ್ನು ಮೇಯಿಸಲು ಮನೆಯಿಂದ ದೂರ ಹೋಗಬಾರದು. ಒಬ್ಬಂಟಿಯಾಗಿ ಓಡಾಡುವುದನ್ನು ತಪ್ಪಿಸಬೇಕು. ಚಿರತೆ ಕಂಡ ತಕ್ಷಣ ಇಲಾಖೆ ಸಿಬ್ಬಂದಿಗೆ ತಿಳಿಸಬೇಕು ಎಂದು ಕರಪತ್ರ ಮತ್ತು ದ್ವನಿವರ್ಧಕದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ.

‘ಕಳೆದ ಐದಾರು ವರ್ಷಗಳಿಂದ ಚಿರತೆ ಹಾವಳಿ ಹೆಚ್ಚಾಗಿದೆ. ನಾಯಿ, ರೈತರ ಜಾನುವಾರುಗಳನ್ನು ಹಿಡಿಯುತ್ತಿತ್ತು. ಚಿರತೆ ಹಿಡಿದು ಬೇರೆಡೆ ಬಿಡಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ. ಒಂದು ತಿಂಗಳ ಹಿಂದೆ ಕಾಟಾಚಾರಕ್ಕೆ ಬೋನಿಟ್ಟರು. ಆಗಲೇ ಚಿರತೆ ಹಿಡಿದಿದ್ದರೆ ಮಹಿಳೆಯ ಸಾವಾಗುತ್ತಿರಲಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್ ಅಸಮಧಾನ ವ್ಯಕ್ತಪಡಿಸಿದರು.

ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ವಲಯ ಅರಣ್ಯ ಇಲಾಖೆಯ ಸುಮಾರು 30 ಸಿಬ್ಬಂದಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಅರೇಮಲ್ಲೇನಹಳ್ಳಿ ಆಸುಪಾಸು ಎಷ್ಟು ಚಿರತೆಗಳಿವೆ, ಅವುಗಳ ಚಲನವಲಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಶನಿವಾರ ಅರೇಮಲ್ಲೇನಹಳ್ಳಿ ಸಮೀಪದಲ್ಲಿ ಚಿರತೆ ನಾಯಿಯೊಂದನ್ನು ತಿಂದಿತ್ತು. ಅದನ್ನೇ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ರಾತ್ರಿ ಬೋನಿನಲ್ಲಿ ಕಟ್ಟಿದ್ದರು. ಅದರಲ್ಲಿ ಮಂಗಳವಾರ ಸಂಜೆ ಸುಮಾರು ಮೂರು ವರ್ಷದ ಗಂಡು ಚಿರತೆ ಬಿದ್ದಿದೆ. ಇನ್ನು ಹೆಣ್ಣು ಚಿರತೆ ಮತ್ತು ಎರಡು ಮರಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಅರೆಮಲ್ಲೇನಹಳ್ಳಿ ಸುತ್ತಮುತ್ತ ಚಿರತೆ ಇರುವ ಕಡೆ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಅರಿವಳಿಕೆ ತಜ್ಞರು ಆಗಮಿಸಿದ್ದು ತಾಲ್ಲೂಕು ಆಡಳಿತ ಸಹಾಯವಾಣಿ ತೆರೆದಿದೆ. ಚಿರತೆ ಕಂಡುಬಂದಲ್ಲಿ 7304975519, 8162213400 ಸಂಪರ್ಕಿಸಬಹುದು.

ಮಕ್ಕಳು ಶಾಲಾಗೆ ಹೋಗುವಾಗ ಮತ್ತು ಬರುವಾಗ ಪೋಷಕರು ಎಚ್ಚರ ವಹಿಸಬೇಕು. ಚಿರತೆ ಹಾವಳಿಯಿಂದ ಒಂಟಿಯಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ಪರಿಹಾರ ವಿತರಣೆ

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮತ್ತು ಶಾಸಕ ಎಂ.ಟಿ.ಕೃಷ್ಣಪ್ಪ ಚಿರತೆ ದಾಳಿಯಿಂದ ಮಹಿಳೆ ಸಾವನ್ನಪಿದ ಕುಟಂಬವನ್ನು ಭೇಟಿಯಾಗಿ ₹5 ಲಕ್ಷ ಪರಿಹಾರದ ಚೆಕ್ ನೀಡಿದರು. ಇನ್ನುಳಿದ ₹15 ಲಕ್ಷವನ್ನು ಶೀಘ್ರವೇ ನೀಡುವ ಭರವಸೆ ನೀಡಿದರು. ಮಹಿಳೆಯ ಮಗನ ವಿದ್ಯಾಭ್ಯಾಸಕ್ಕೆ ಐದು ವರ್ಷ ಪ್ರತಿ ತಿಂಗಳು ₹4ಸಾವಿರ ಸಹಾಯಧನ ನೀಡಲಾಗುವುದು. ಮಗಳಿಗೆ ಕಂಪ್ಯೂಟರ್ ಆಪರೇಟರ್ ಕೆಲಸ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಜೆಡಿಎಸ್ ಮುಖಂಡ ದೊಡ್ಡಾಘಟ್ಟ ಚಂದ್ರೇಶ್ ಮೃತರ ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.