ಚಿರತೆ
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಗೋಣಿತುಮಕೂರು ಮತ್ತು ಆಸುಪಾಸು ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರ ಮೇಲೆ ಒಂದೇ ದಿನ ಚಿರತೆ ದಾಳಿ ನಡೆಸಿದೆ.
ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಎಲ್ಲರನ್ನೂ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗೇಟ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯಲ್ಲಿ ಮಹಿಳೆ ಮುಖದಲ್ಲಿ ಆಳವಾದ ಪರಚಿದ ಗಾಯಗಳಾಗಿದ್ದು, ತುಟಿ ಹರಿದು ಹೋಗಿದೆ. ಉಳಿದವರ ಬೆನ್ನು, ಭುಜ, ಕೈ, ಕಾಲುಗಳಿಗೆ ಪರಚಿದ ಗಾಯಗಳಾಗಿವೆ.
ಮೊದಲು ತಾಲ್ಲೂಕಿನ ನಡುವನಹಳ್ಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವನಜಾಕ್ಷಮ್ಮ ಎಂಬುವರ ಮೇಲೆ ಚಿರತೆ ದಾಳಿ ಮಾಡಿದೆ. ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಿಕೊಂಡಾಗ ಬೆದರಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಅಲ್ಲಿಂದ ಗೋಣಿತುಮಕೂರು ಹೊರವಲಯದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಚ್ಚಮ್ಮ ಎಂಬುವರ ಮೇಲೆ ಎರಗಿದೆ. ಅವರ ಮುಖ ಹಾಗೂ ಕುತ್ತಿಗೆಯನ್ನು ಹರಿತವಾದ ಉಗುರುಗಳಿಂದ ಪರಚಿದೆ. ಹುಚ್ಚಮ್ಮ ಅವರ ತುಟಿ ಸೀಳಿದ್ದು, ಮೂಗು, ಕಣ್ಣಿನ ಬಳಿ ಆಳವಾದ ಗಾಯಗಳಾಗಿವೆ. ಮಹಿಳೆ ಚೀರಾಟ ಕೇಳಿ ಸಹಾಯಕ್ಕೆ ಬಂದ ಬೋರೇಗೌಡ ಮತ್ತು ಸಣ್ಣಲಿಂಗಯ್ಯ ಮೇಲೂ ದಾಳಿ ನಡೆಸಿದೆ. ಅವರ ಕೈ, ಕಾಲು ಮತ್ತು ಬೆನ್ನಿಗೆ ಪರಚಿದ ಗಾಯಗಳಾಗಿವೆ.
ಶೆಡ್‌ನಲ್ಲಿ ಸೆರೆ ಸಿಕ್ಕ ಚಿರತೆ: ಇದಾದ ನಂತರ ದೇವಿಹಳ್ಳಿ ತೋಟದ ಮನೆಯ ಶೇಖರಯ್ಯ ಅವರ ಶೆಡ್‌ಗೆ ನುಗ್ಗಿದೆ. ಶೆಡ್‌ನಲ್ಲಿದ್ದ ಶೇಖರಯ್ಯ ಅವರನ್ನು ಗಾಯಗೊಳಿಸಿದೆ. ತಕ್ಷಣ ಅವರು ಶೆಡ್ ಬಾಗಿಲು ಹಾಕಿಕೊಂಡು ಹೊರ ಬಂದಿದ್ದಾರೆ. ಶೆಡ್ ಮತ್ತು ಮನೆ ನಡುವಿದ್ದ ಬಾಗಿಲು ಮೂಲಕ ಚಿರತೆ ಮನೆಯೊಳಗೆ ಪ್ರವೇಶಿಸಿದೆ. ಸದ್ಯ ಮನೆಯಲ್ಲಿ ಬಂಧಿಯಾಗಿರುವ ಚಿರತೆ ನೋಡಲು ಗ್ರಾಮಸ್ಥರು ತೋಟದ ಮನೆಯ ಮುಂದೆ ಜಮಾಯಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹೂಡಿದ್ದು ಚಿರತೆ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ.
‘ಮೈಸೂರಿನಿಂದ ಅರವಳಿಕೆ ತಜ್ಞರು ಬರಲಿದ್ದು ತಡರಾತ್ರಿವರೆಗೆ ಚಿರತೆ ಸೆರೆ ಕಾರ್ಯಚರಣೆ ನಡೆಯಲಿದೆ. ಈಗಾಗಲೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚವನ್ನು ಇಲಾಖೆಯೇ ಭರಿಸಲಿದೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ತಿಳಿಸಿದರು. ಜಿಲ್ಲಾ ಅರಣ್ಯಾಧಿಕಾರಿ ಶಶಿಧರ್, ಭರತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
‘ಮರಿಗಳು ಸೇರಿದಂತೆ ಗುಂಪಿನಲ್ಲಿ ಮೂರ್ನಾಲ್ಕು ಚಿರತೆಗಳಿವೆ. ಐದಾರು ಮೇಕೆ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ’ ಎಂದು ಗ್ರಾಮಸ್ಥರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.